ರಾಜಸ್ಥಾನದ ಕೈ ಬಂಡಾಯ ಶಾಸಕರಿಗೆ ವಿಪ್ ಖೆಡ್ಡಾ; ಸ್ಪೀಕರ್ ನೋಟಿಸ್ ಪ್ರಶ್ನಿಸಿದ ಅರ್ಜಿ ವಿಚಾರಣೆ ಇಂದು

Nation-1
Published on

ಜೈಪುರ್: ಬಂಡಾಯ ನಾಯಕ ಸಚಿನ್ ಪೈಲಟ್ ಬಣಕ್ಕೆ ಒಂದೊಮ್ಮೆ ರಾಜಸ್ಥಾನ ಹೈಕೋರ್ಟ್​ನಲ್ಲಿ ನಿರಾಳತೆ ಸಿಕ್ಕಲ್ಲಿ ಸರ್ಕಾರ ಉಳಿಸಿಕೊಳ್ಳಲು ಪ್ಲಾ್ಯನ್ ಬಿ ಜಾರಿಗೊಳಿಸಲು ರಾಜಸ್ಥಾನ ಕಾಂಗ್ರೆಸ್ ಹೊಸ ತಂತ್ರ ಹೆಣೆದಿದೆ. ವಿಧಾನಸಭೆಯ ತುರ್ತು ಅಧಿವೇಶನ ಕರೆದು ವಿಪ್ ಅಸ್ತ್ರದ ಮೂಲಕ ವಿಶ್ವಾಸಮತಯಾಚನೆಯ ಅಗ್ನಿಪರೀಕ್ಷೆ ಗೆಲ್ಲುವುದು ಕೈ ನಾಯಕರ ಲೆಕ್ಕಾಚಾರ.

ಸ್ಪೀಕರ್ ನೀಡಿರುವ ನೋಟಿಸ್ ಪ್ರಶ್ನಿಸಿ ಪೈಲಟ್ ಬಣದ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. ಬಂಡಾಯ ಮುಖ್ಯಮಂತ್ರಿ ವಿರುದ್ಧವೇ ಹೊರತು ಸರ್ಕಾರ ಅಥವಾ ಪಕ್ಷದ ವಿರುದ್ಧ ಅಲ್ಲ. ಹೀಗಾಗಿ ನಾವು ಸರ್ಕಾರ ಬೀಳಿಸಲು ಪ್ರಯತ್ನ ನಡೆಸುತ್ತಿಲ್ಲ ಎಂಬ ನಿಲುವನ್ನು ಬಂಡಾಯ ನಾಯಕರು ಈಗಾಗಲೇ ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೇ ನಿಲುವನ್ನು ಹೈಕೋರ್ಟ್ ಬೆಂಬಲಿಸಿದಲ್ಲಿ ಪೈಲಟ್ ಬಣ ಪಕ್ಷ ವಿರೋಧಿ ಚಟುವಟಿಕೆ ಶಿಕ್ಷೆಯಿಂದ ಪಾರಾಗಲಿದೆ. ಹೀಗಾಗಿ ತುರ್ತು ಅಧಿವೇಶನ ಕರೆದು ವಿಶ್ವಾಸಮತಯಾಚನೆಗೆ ಅಣಿಯಾದರೆ ವಿಪ್ ಮೂಲಕ ಬಂಡಾಯ ಶಾಸಕರನ್ನು ಸಂಕಷ್ಟಕ್ಕೆ ಸಿಲುಕಿಸಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್​ನಲ್ಲಿ ನಡೆದಿದೆ.

ಬಿಟಿಪಿ ಬೆಂಬಲ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ನಡೆಸುತ್ತಿರುವಾಗಲೇ ತಾವು ಸಿಎಂ ಬೆಂಬಲಕ್ಕೆ ನಿಲ್ಲುವುದಾಗಿ ಇಬ್ಬರು ಶಾಸಕರನ್ನೊಳಗೊಂಡ ಭಾರತೀಯ ಬುಡಕಟ್ಟು ಪಕ್ಷ(ಬಿಟಿಪಿ)ಸ್ಪಷ್ಟಪಡಿಸಿದೆ. ಈ ವಿಚಾರವನ್ನು ಗೆಹ್ಲೋಟ್ ಖಚಿತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಪಕ್ಷ ಬೆಂಬಲ ಹಿಂಪಡೆಯುವುದಾಗಿ ಹೇಳಿತ್ತು.

ಕೈ ಲೆಕ್ಕಾಚಾರ?: ರಾಜಸ್ಥಾನ ಹೈಕೋರ್ಟ್ ಆದೇಶ ಭಿನ್ನರ ಪರವಾಗಿ ಬಂದಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ವಿಶ್ವಾಸಮತ ಯಾಚನೆ ಹಾದಿ ತುಳಿಯಬಹುದು ಭಿನ್ನರು ಇನ್ನೂ ಪಕ್ಷದಲ್ಲೇ ಇರುವುದರಿಂದ ಸರ್ಕಾರದ ಪರವಾಗಿ ಮತ ಹಾಕುವಂತೆ ವಿಪ್ ಜಾರಿಗೊಳಿಸುವುದು ಒಂದೊಮ್ಮೆ ಪೈಲಟ್ ಬಣ ವಿಪ್ ಉಲ್ಲಂಘಿಸಿದರೆ ಪಕ್ಷ ವಿರೋಧಿ ಕಾಯ್ದೆಯಡಿ ಶಾಸಕತ್ವದಿಂದ ಅನರ್ಹಗೊಳಿಸಬಹುದು.

ಈ ವಾರವೇ ಅಧಿವೇಶನ: ಸಿಎಂ ಅಶೋಕ್ ಗೆಹ್ಲೋಟ್ ಶನಿವಾರ ಸಂಜೆ ರಾಜ್ಯಪಾಲ ಕಲ್​ರಾಜ್ ಮಿಶ್ರಾರನ್ನು ಭೇಟಿಯಾದ ಬೆನ್ನಲ್ಲೇ ವಾರದೊಳಗೆ ವಿಧಾನಸಭೆ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಧಿವೇಶನ ಕರೆಯುವುದು ಸೇರಿದಂತೆ ಎಲ್ಲ ರೀತಿಯ ಆಯ್ಕೆಗಳು ಸರ್ಕಾರದ ಮುಂದಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮಾಹಿತಿ ಪಡೆದ ಅಮಿತ್ ಷಾ: ರಾಜಸ್ಥಾನ ಸರ್ಕಾರ ಉರುಳಿಸಲು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾಂಗ್ರೆಸ್ ಶಾಸಕರೊಂದಿಗೆ ಚೌಕಾಸಿ ಆರಂಭಿಸಿದ್ದಾರೆನ್ನುವ ಆರೋಪದ ಬೆನ್ನಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜಸ್ಥಾನದ ಇತ್ತೀಚಿನ ಪರಿಸ್ಥಿತಿಗಳ ಮಾಹಿತಿ ಪಡೆದುಕೊಂಡಿದ್ದಾರೆ. ದೂರವಾಣಿ ಕದ್ದಾಲಿಕೆ ಆರೋಪವಾಗಿಯೂ ಪೂರ್ಣ ವರದಿನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಭಾನುವಾರ ಆದೇಶಿಸಿದ್ದಾರೆ.

ಅಶೋಕ್ ಗೆಹ್ಲೋಟ್ ತಪ್ಪೆಸಗಿರಬಹುದು. ಆದರೆ ಎಲ್ಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸ ಲಾಗುವುದು. ಸಿಂಧಿಯಾ ಮಾಡಿದ ತಪ್ಪನ್ನು ಪೈಲಟ್ ಮಾಡುವುದು ಬೇಡ. ಬಿಜೆಪಿ ವಿಶ್ವಾಸಾರ್ಹವಲ್ಲ. | ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ಹಿರಿಯ ಮುಖಂಡ ರಾಜಸ್ಥಾನದ ದೂರವಾಣಿ ಕದ್ದಾಲಿಕೆ ಪ್ರಕರಣದ ಸಂಬಂಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆದ್ದರಿಂದ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಿಂದ ಕೈಬಿಡಬೇಕು. | ಅಜಯ್ ಮಾಕನ್ ಕಾಂಗ್ರೆಸ್ ಹಿರಿಯ ಮುಖಂಡ https://www.vijayavani.net/aaditya-thackeray-moves-sc-against-final-year-exams-decision/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net