

ರಾಣೆಬೆನ್ನೂರ: ಪಕ್ಷದ ಯಾವ ಕಾರ್ಯಕರ್ತರೂ ಹಾಗೂ ಮುಖಂಡರ ಮೋಸದಿಂದ ನಾವು ಸೋತಿಲ್ಲ. ಶಹರದ ಮತಗಳು ಕೊಂಚ ಕೈ ಕೊಟ್ಟಿದ್ದರಿಂದ ಸೋಲಾಗಿದೆ. ಹಾಗಾಂತ ಯಾರೂ ಎದೆಗುಂದದೆ ಪಕ್ಷ ಸಂಘಟನೆ ಮಾಡೋಣ. ಮುಂದಿನ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸೋಣ. ನಾನು ಸಹ ಅವರ ಗೆಲುವಿಗಾಗಿ ದುಡಿಯುವೆ ಎಂದು ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಅಭ್ಯರ್ಥಿಯಾದ ಬಳಿಕ ನಿಮ್ಮ ನಮ್ಮ ಒಡನಾಟ ಶುರುವಾಗಿದೆ. ಆದರೆ, ಇಷ್ಟು ಚಿಕ್ಕ ಸಮಯದಲ್ಲಿಯೆ ಪ್ರತಿಯೊಬ್ಬರೂ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿದ್ದೀರಿ. ಇದು ನನಗೆ ಚುನಾವಣೆಯಲ್ಲಿ ಅತ್ಯಂತ ಸಂತೋಷ ತಂದುಕೊಟ್ಟಿದೆ. ಯಾವ ಕಾರ್ಯಕರ್ತರು ಬೇರೆ ಬೇರೆ ಪಕ್ಷಕ್ಕೆ ಬೆಂಬಲ ನೀಡುವುದು ಸೇರಿ ಯಾರೂ ವಂಚನೆ ಮಾಡಿಲ್ಲ. ಆರ್. ಶಂಕರ ಕೂಡ ಚನ್ನಾಗಿ ಕೆಲಸ ಮಾಡಿದ್ದಾರೆ ಎಂದರು.
ಮುಂದೆಯೂ ಯಾರೇ ಅಭ್ಯರ್ಥಿಯಾದರೂ ರಾಣೆಬೆನ್ನೂರ ಕಾರ್ಯಕರ್ತರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಪ್ರಕಾಶ ಕೋಳಿವಾಡಗಿಂತ ನನಗೆ ಹೆಚ್ಚು ಮತ ಗಳು ಬಂದಿವೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾವು ಕೆಲಸ ಮಾಡೋಣ ಎಂದರು.
ದೇಶದಲ್ಲಿ ಬದಲಾವಣೆ ಗಾಳಿ ಬಿಸಿದೆ. ಕ್ಷೇತ್ರದ ಎಲ್ಲೆಡೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ರಾಣೆಬೆನ್ನೂರ, ಹಾವೇರಿ, ಬ್ಯಾಡಗಿ, ಗದಗ ಶಹರ ಭಾಗದಲ್ಲಿ ಮಾತ್ರ ಹಿನ್ನಡೆಯಾಗಿದೆ. ಗದಗದಲ್ಲಿ ಶಹರದಲ್ಲಿಯೆ ಬಿಜೆಪಿಗೆ 11 ಸಾವಿರ ಲೀಡ್ ಆಗಿದೆ. ಇದನ್ನು ಬೀಟ್ ಮಾಡಲು ಗ್ರಾಮೀಣ ಮತಗಳಿಗೆ ಆಗಲಿಲ್ಲ. ಆದ್ದರಿಂದ ಪಕ್ಷಕ್ಕೆ ಸೋಲಾಗಿದೆ ಎಂದರು.
ಅಧಿಕಾರ ಬರುತ್ತೆ ಹೊಗುತ್ತೆ. ನಾನು ಹುಟ್ಟಿದ ಸಮಯದಲ್ಲಿಯೆ ನನ್ನ ತಂದೆ ಸ್ಥಳೀಯ ಸಂಸ್ಥೆ ಸದಸ್ಯ ಆಗಿದ್ದರು. ಹೀಗಾಗಿ ರಾಜಕೀಯ ನಮಗೇನು ಹೊಸದಲ್ಲ. ಆದರೆ, ಇದರ ನಡುವೆ ಏನು ಸಂಬಂಧ ಬೆಳೆಯುತ್ತದೆ. ಅದು ಮಾತ್ರ ನಮ್ಮೊಂದಿಗೆ ಸದಾ ಇರಲಿದೆ. ಆದ್ದರಿಂದ ಎಲ್ಲರೂ ಒಂದಾಗಿ ಮುನ್ನಡೆಯೋಣ ಎಂದರು.
ಚುನಾವಣೆಯ ಬಗ್ಗೆ ಯಾರ ಮೇಲೂ ಅಪವಾದ ಕೊಡಬೇಡಿ. ಆರೋಪ ಮಾಡಬೇಡಿ. ಹತ್ತರಲ್ಲಿ ಎರಡು ಜನ ಇದ್ದಾಗ ಏನೂ ಮಾಡಲು ಬರಲ್ಲ. ಸೋತಾಗ ಬಹಳ ಜನ ಬಹಳಷ್ಟು ಅಪವಾದ ಕೊಡುತ್ತಾರೆ. ಅದಕ್ಕೆಲ್ಲ ಯಾರೂ ಬೇಸರ ಮಾಡಿಕೊಳ್ಳಬಾರದು ಎಂದರು.
ತಾಲೂಕು ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಶೇರುಖಾನ ಕಾಬೂಲಿ, ಪ್ರಮುಖರಾದ ಕೃಷ್ಣಪ್ಪ ಕಂಬಳಿ, ಬಿ.ಬಿ. ನಂದ್ಯಾಲ, ರಾಜು ಅಡಿವೆಪ್ಪನವರ, ಬಸನಗೌಡ ಮರದ, ರಾಜಣ್ಣ ಮೋಟಗಿ, ರುಕ್ಮಿಣಿ ಸಾವುಕಾರ, ಏಕನಾಥ ಬಾನುವಳ್ಳಿ, ಚಂದ್ರಪ್ಪ ಬೇಡರ, ಸಿದ್ದಣ್ಣ ಅಂಬಲಿ, ನೀಲಕಂಠಪ್ಪ ಕುಸಗೂರ, ರವೀಂದ್ರಗೌಡ ಪಾಟೀಲ, ಸಣ್ಣತಮ್ಮಪ್ಪ ಬಾರ್ಕಿ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕರ್ತರು ಏನೆಂದರು…?
ನಿಜವಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಲೆ ಕೊಡಿ. ಹಿಂದಿನ ಬಾಗಿಲಿನಿಂದ ಬಂದು ಕೆಲಸ ಮಾಡಿಸಿಕೊಳ್ಳುವರಿಗೆ ಬೆಲೆ ಕೊಡಬೇಡಿ. ಇತ್ತ ಕಡೆ ಹೋದರೆ ಏನು ಲಾಭ, ಅತ್ತ ಕಡೆ ಹೋದರೆ ಏನು ಲಾಭ ಎನ್ನುವವರನ್ನು ದೂರವಿಡಿ. ಕಾಣದ ಕೈಗಳು ಕೆಲಸ ಮಾಡಿದ್ದರಿಂದ ಸೋಲು ಕಂಡಿದೆ. ಪಕ್ಷದ ವಿರೋಧಿ ಚಟುವಟಿಕೆ ಮಾಡಿದವರನ್ನು ಹೊರ ಹಾಕಬೇಕು. ಆತ್ಮಾವಲೋಕನ ಸಭೆ ಗುಪ್ತವಾಗಿ ಮಾಡಿ, ಅಂದರೆ ಮುಕ್ತವಾಗಿ ಚರ್ಚಿಸಲು ಸಾಧ್ಯ ಎಂದು ಸಭೆಯಲ್ಲಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಮುಂದೆಯೂ ಟಿಕೆಟ್ ತೆಗೆದುಕೊಂಡು ಬನ್ನಿ. ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಆತ್ಮಸ್ಥೈರ್ಯ ತುಂಬಿದರು.