ಸಿದ್ದರಾಮಯ್ಯ ಮುಂದೆ ಕಾಂಗ್ರೆಸ್ ಹೈಕಮಾಂಡ್ ದುರ್ಬಲ: ಪ್ರಲ್ಹಾದ ಜೋಶಿ ಚಾಟಿ

IMG-20241002-WA0022
Published on

ಬೆಂಗಳೂರು:  ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವಂತಹ ನೈತಿಕತೆ ಕಾಂಗ್ರೆಸ್ ಹೈಕಮಾಂಡ್ ಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ನಾಯಕರು ಜಾಮೀನಿನ ಮೇಲಿದ್ದು, ಸಿದ್ದರಾಮಯ್ಯ ಮುಂದೆ ಹೈಕಮಾಂಡ್ ದುರ್ಬಲವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.

ಗಾಂಧಿ‌ ಜಯಂತಿ ನಿಮಿತ್ತ ಪಕ್ಷ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಎಲ್ಲಾ ಬೇಲ್ ಮೇಲೆ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತದೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹೈ ಕಮಾಂಡ್ ನ ಈ ನಾಯಕರೇ ಪ್ರಖರ ಮತ್ತು ಗಹಣವಾದಂತಹ ಆರ್ಥಿಕ ಅಪರಾಧ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಿ ಎನ್ನುವ ನೈತಿಕತೆ ಹೊಂದಿಲ್ಲ ಎಂದು ಜೋಶಿ ಲೇವಡಿ ಮಾಡಿದರು.

ಭ್ರಷ್ಟಾಚಾರದಲ್ಲಿ ಮುಳುಗಿ ಕಾಂಗ್ರೆಸ್ ಹೈ ಕಮಾಂಡ್ ಲೋ ಕಮಾಂಡ್ ಆಗಿಬಿಟ್ಟಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿದರೆ ರಾಹುಲ್ ಗಾಂಧಿ ಅವರು ಮೊದಲು ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬಳಿಕ ನನ್ನನ್ನು ಕೇಳಿರೆಂದು ತಿರುಗಿ ಹೇಳುತ್ತಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಿ ಎನ್ನುವ ಸ್ಥೈರ್ಯ ತೋರುತ್ತಿಲ್ಲ. ಸಂಪೂರ್ಣ ನೈತಿಕತೆ ಕಳೆದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಜೋಶಿ ಹೇಳಿದರು.

ಸಿಎಂ ಭಂಡತನ ಪ್ರದರ್ಶನ

ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ ಸಚಿವ ಪ್ರಲ್ಹಾದ ಜೋಶಿ, ಪಕ್ಷದಲ್ಲಿ ಬೆಲೆ, ಗೌರವ-ಮರ್ಯಾದೆ, ನೈತಿಕತೆ ಏನಾದರೂ ಇದ್ದರೆ ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಆಗ್ರಹಿಸಿದರು.

ಮುಡಾ ಹಗರಣದ ತನಿಖೆ ಬಳಿಕ ಸಿಎಂ ಸಿದ್ದರಾಮಯ್ಯ ಶುದ್ಧರು ಎಂದಾದರೆ ಮತ್ತೆ ಮುಖ್ಯಮಂತ್ರಿ ಆಗಲಿ. ಆದರೆ, ಈಗ ರಾಜೀನಾಮೆ ಕೊಡಲಿ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗೋರು ಬೇರೆ ಯಾರೂ ಇಲ್ಲವೇ? ಕಾಂಗ್ರೆಸ್ ಒಬಿಸಿ ನಾಯಕರಿಗೆ ಹಿಂದಿನಿಂದಲೂ ಅಧಿಕಾರ ವಂಚಿತರನ್ನಾಗಿ ಮಾಡುತ್ತಲೇ ಇದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಅಥವಾ ಬೀಳಿಸುವ ಯಾವುದೇ ಉದ್ದೇಶ ಬೀಜೆಪಿಗಿಲ್ಲ. ಆದರೆ, ಭ್ರಷ್ಟಾಚಾರದ ವಿರುದ್ಧ ನ್ಯಾಯಯುತ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net