ಜನರ ಗಮನ ಬೇರೆಡೆ ಸೆಳೆದ ಕಾಂಗ್ರೆಸ್: ಛಲವಾದಿ | Agitation will not stop

Chalavadi Narayana swamy
Published on

ಬೆಂಗಳೂರು: ಆರ್ ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಮತ್ತು 11 ಸಾವಿಗೆ ಸಂಬಂಧಿಸಿ ಕಾಂಗ್ರೆಸ್ ಹೈಕಮಾಂಡ್ ನಿಂದ ಸಿಎಂ, ಡಿಸಿಎಂ ತಲೆದಂಡದ ನಿರೀಕ್ಷೆಯಲ್ಲಿದ್ದೆವು. ಅದರ ಬದಲಾಗಿ ಜಾತಿ ಜನಗಣತಿ ವರದಿಯನ್ನು ಅಡ್ಡ ಇಟ್ಟು ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್.ಸಿ.ಬಿ ಗೆಲುವಿನ ಪ್ರಯೋಜನ ಪಡೆಯಲು ಪಂದ್ಯಾಟವನ್ನು ಗೆಲ್ಲುವ ಮೊದಲೇ ಸಂಭ್ರಮಾಚರಣೆಗೆ ಅನುಮತಿ ಪಡೆದಿತ್ತು. ಬಳಿಕ ಸಂಭ್ರಮ ಆಚರಿಸಲು ಹೋಗಿ 11 ಜನರ ಸಾವಿಗೆ ಕಾರಣವಾದ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿದೆ ಎಂದು ಗಮನ ಸೆಳೆದರು.

ಹಲವಾರು ಜನರು ಗಾಯಗೊಂಡ ಈ ದುರ್ಘಟನೆಯ ಬಗ್ಗೆ ವಿರೋಧ ಪಕ್ಷ ಬಿಜೆಪಿ, ದುರಂತವನ್ನು ಎಳೆ ಎಳೆಯಾಗಿ ಬಿಡಿಸಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿಯವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇವರು ಮಾಡಿದ ಅಪರಾಧಕ್ಕೆ ಇವರಿಬ್ಬರ ತಲೆದಂಡದ ನಿರೀಕ್ಷೆ ಹುಸಿಯಾಗಿದೆ.

ಬಿಜೆಪಿ ಯಾವುದೇ ಕಾರಣಕ್ಕೂ ಇವರ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ, ಇವರಿಬ್ಬರೂ ಘಟನೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ನಾಚಿಕೆಗೇಡು

ಕಾಂಗ್ರೆಸ್ ಸಂಸದ, ಶಾಸಕರ ಮನೆ- ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ದಾಳಿಯಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣವನ್ನು ಕದ್ದು ತಿಂದಿದ್ದರು. ಶಾಸನ ಸಭೆಯಲ್ಲಿ ಮುಖ್ಯಮಂತ್ರಿಗಳು ಕೇವಲ 87 ಕೋಟಿ ಎಂದು ಒಪ್ಪಿಕೊಂಡಿದ್ದರು. ಭ್ರಷ್ಟಾಚಾರವನ್ನು ಒಪ್ಪಿಕೊಂಡ ನಂತರವೂ ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.

ಇ.ಡಿ ರೇಡ್ ಆಗಿರುವ ಜನನಾಯಕರು ಯಾರು ಎಷ್ಟು ಬಳಸಿದ್ದಾರೆ ಎಂಬ ವಿವರ ಸಿಕ್ಕಿದೆ, ಈ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್ ಮರಣ ಹೊಂದಿದ್ದು ಇವರ ಸಾವಿನ ಬಗ್ಗೆ ಸರ್ಕಾರ ಒಂದು ದಿನವೂ ಪ್ರಸ್ತಾಪ ಮಾಡಿಲ್ಲ. ಯಾರು ಅಪರಾಧದಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲರ ಸದಸ್ಯತ್ವವು ರದ್ದಾಗುತ್ತದೆ ಎಂದರು.

ಇ.ಡಿ. ಮಂಗಳವಾರ ಪತ್ರ ಬಿಡುಗಡೆ ಮಾಡಿದ್ದು ಮೂಡಾದಲ್ಲಿ 400 ಕೋಟಿ ರೂಗಳ ಆಸ್ತಿಯನ್ನು ವಶಪಡಿಸಿಕೊಂಡಿರುವ ಬಗ್ಗೆ ತಿಳಿಸಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರಿ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡಬಾರದು ಎಂದು ಒತ್ತಾಯಿಸಿದರು.

ದಿನಕ್ಕೆ ಮೂರು ಹಗರಣ

ಕಾಂಗ್ರೆಸ್ ಸರ್ಕಾರವು ದಿನಕ್ಕೊಂದು ಹಗರಣವಲ್ಲ; ಒಂದೇ ದಿನಕ್ಕೆ ಮೂರು ಹಗರಣಗಳನ್ನು ಮಾಡುತ್ತಿದೆ. ಸರ್ಕಾರದಲ್ಲಿರುವವರು ಮುಖಭಂಗ, ಅವಮಾನವನ್ನೆಲ್ಲ ಗಾಳಿಗೆ ತೂರಿ, ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ.

ಸರ್ಕಾರ ಎಲ್ಲ ರೀತಿ ತಪ್ಪುಗಳನ್ನು ಮಾಡಿ, ನಾಚಿಕೆ, ಮಾನ-ಮರ್ಯಾದೆ ಬಿಟ್ಟು ಏನೂ ಆಗಿಲ್ಲವೆಂದು ವರ್ತಿಸುತ್ತಿದೆ. ಇವರು ತಪ್ಪು ಮಾಡಿದ್ದಕ್ಕೆ ತಾನೇ ಇ.ಡಿ. ಮತ್ತು ಸಿ.ಬಿ.ಐ ತನಿಖೆ ಮಾಡಲು ಬರುವುದು? ಇವರು ತಪ್ಪು ಮಾಡಿಲ್ಲವೆಂದರೆ ತನಿಖಾ ಸಂಸ್ಥೆಗಳು ಏಕೆ ಬರುತ್ತವೆ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net