ಗೃಹ ಮಂತ್ರಿಯನ್ನೇ ಕತ್ತಲೆಯಲ್ಲಿಟ್ಟ ಕಾಂಗ್ರೆಸ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ | Convene all party meeting to discuss law and order

Chalavadi Narayana swamy
Published on

ಬೆಂಗಳೂರು: ಕಾಂಗ್ರೆಸ್‌ನಿಂದ ಒಂದೆಡೆ ಲೂಟಿ ನಡೆದಿದ್ದರೆ, ಕಳ್ಳ-ಖದೀಮರಿಂದ ಮತ್ತೊಂದೆಡೆ ದರೋಡೆಯಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಅವರನ್ನೇ ರಾಜ್ಯ ಸರ್ಕಾರ ಕತ್ತಲೆಯಲ್ಲಿಟ್ಟಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬೀದರ್‌ನಲ್ಲಿ ದರೋಡೆ ಪ್ರಕರಣದ ಆರೋಪಿಗಳು ಇನ್ನೂ ಸಿಕ್ಕಿಲ್ಲ. ಮಂಗಳೂರಿನಲ್ಲಿ ಮತ್ತೊಂದು ದರೋಡೆ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಪೊಲೀಸರ ದೌರ್ಜನ್ಯ ಪ್ರಕರಣದಿಂದ ಹಿಡಿದು ಬಹುತೇಕ ಘಟನೆಗಳ ಬಗ್ಗೆ ಸಚಿವ ಪರಮೇಶ್ವರ್‌ಗೆ ಮಾಹಿತಿ ಸಿಗಲಿಲ್ಲ. ಅಷ್ಟರಮಟ್ಟಿಗೆ ಸರ್ಕಾರ ಅವರನ್ನು ಕತ್ತಲಲ್ಲಿಟ್ಟಿದೆ ಎಂದು ಛಲವಾದಿ ನಾರಾಯಣಸ್ವಾಮಿ ಛೇಡಿಸಿದರು.

ಒಂದೇ ಒಂದು ಘಟನೆ ತೋರಿಸಲಿ

ಆರ್‌ಎಸ್‌ಎಸ್, ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆಯನ್ನು ತಿಳಿಸಲಿ ಎಂದು ಸವಾಲೆಸೆದರು.

ಏನೋ ಒಂದು ಆಪಾದನೆ ಮಾಡಬೇಕು ಎನ್ನುವುದಕ್ಕಾಗಿ ಮಾಡುತ್ತಿದ್ದಾರಷ್ಟೇ. ಸಂವಿಧಾನ ತಿದ್ದಿದ್ದು ಕಾಂಗ್ರೆಸ್ ಪಕ್ಷ. ಅಷ್ಟೇ ಅಲ್ಲ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಅಧಿಕಾರದ ಅವಧಿಯುದ್ದಕೂ ನಡೆದಿರುವುದಕ್ಕೆ ಸಾಕಷ್ಟು ನಿದರ್ಶನಗಳು, ನ್ಯಾಯಾಲಯದ ತೀರ್ಪುಗಳಿವೆ ಎಂದು ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದರು.

ಸರ್ವಪಕ್ಷಗಳ ಸಭೆಗೆ ಆಗ್ರಹ

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ದರೋಡೆಗಳು ನಡೆದು ಜನರಲ್ಲಿ ಭಯ, ಆತಂಕ ಸೃಷ್ಟಿಯಾಗಿದೆ. ಕಾನೂನು-ಸುವ್ಯವಸ್ಥೆ ಕಾಪಾಡಲು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಮಂಗಳೂರಿನ ದರೋಡೆ ಪ್ರಕರಣದ ಆರೋಪಿಗಳು ಸಲೀಸಲಾಗಿ ತಪ್ಪಿಸಿಕೊಂಡು ಹೋದದ್ದು, ಟೋಲ್‌ಗಳನ್ನು ಇನ್ನಷ್ಟು ಬಿಗಿ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದು, ಸಿಎಂ ಎತ್ತಿರುವ ಪ್ರಶ್ನೆಗಳು ನಾಚಿಕೆಗೇಡಿನವು ಎಂದು ಟೀಕಿಸಿದರು.

ಬೀದರ್, ವಿಜಯಪುರ, ಮಂಗಳೂರಿನಲ್ಲಿ ದರೋಡೆಗಳು, ಬೆಂಗಳೂರಿನಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಮೂರು ಹಸುಗಳ ಕೆಚ್ಚಲು ಕೊಯ್ದ ಹೀನಕೃತ್ಯ, ಸಿಸಿಟಿವಿಗಳು ನಿಷ್ಕ್ರಿಯತೆ ಇದೆಲ್ಲ ಗಮನಿಸಿದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಗೃಹ ಸಚಿವರಿಗೆ ಇಲಾಖೆ ಮೇಲೆ ಹಿಡಿತವಿಲ್ಲ ಎಂಬುದು ಖಾತರಿಯಾಗುತ್ತದೆ ಎಂದು ಎನ್.ರವಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net