

ಬೆಂಗಳೂರು: ರಾಜ್ಯದ ಆಡಳಿತದ ಚುಕ್ಕಾಣಿ ಮುಖ್ಯಮಂತ್ರಿ ಕೈಯ್ಯಲ್ಲಿಲ್ಲ. ಕಮಿಷನ್ ಮಾಫಿಯಾ ಹಿಡಿತದಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿದೆ. ಸಚಿವರಿಗೆ ವಸೂಲಿ ಟಾಸ್ಕ್ ನೀಡಿರುವ ಸಿಎಂ ಸಿದ್ದರಾಮಯ್ಯ ಎಲ್ಲವನ್ನು ನೋಡುತ್ತಾ ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ದಾಖಲೆ ಮುರಿಯಬೇಕೆಂದು ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಅಂಟಿಕೊಂಡು ಕುಳಿತಿದ್ದಾರೆ. ಸರ್ಕಾರವನ್ನು ಸಿದ್ದರಾಮಯ್ಯ ನಡೆಸುತ್ತಿಲ್ಲ, ಕಮಿಷನ್ ವಸೂಲಿಗೆ ಸ್ವತಃ ಏಜೆಂಟರನ್ನು ನೇಮಿಸಿದವರೂ ಅವರೇ ಎಂದು ಗಂಭೀರ ಆರೋಪ ಮಾಡಿದರು.
ಅಭಿವೃದ್ಧಿ ಸ್ಥಗಿತ, ಭ್ರಷ್ಟಾಚಾರದಿಂದ ಕಾಂಗ್ರೆಸ್ ಪಕ್ಷದ ಶಾಸಕರು ರೋಸಿ ಹೋಗಿದ್ದಾರೆ. ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ, ಎನ್.ವೈ.ಗೋಪಾಲಕೃಷ್ಣ ಹೇಳಿಕೆಗಳೇ ನಿದರ್ಶನ. ಮತ್ತಷ್ಟು ಶಾಸಕರು ಮಾತನಾಡಲಿದ್ದಾರೆ ಎಂದು ಅವರೇ ಹೇಳಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಸೂಲಿ ಟಾಸ್ಕ್ ಪೂರ್ಣಗೊಳಿಸಲು ಮುಂದಾದ ಬಿ.ನಾಗೇಂದ್ರ ಸಿಕ್ಕಿ ಬಿದ್ದರು. ಭ್ರಷ್ಟಾಚಾರ ಮೇರೆ ಮೀರಿದೆ, ಮುಂದಿನ ಟ್ರ್ಯಾಪ್ ಟಾರ್ಗೆಟ್ ವಸತಿ ಸಚಿವ ಜಮೀರ್ ಅಹ್ಮದ್ ಆಗಿದ್ದಾರೆ. ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ನೂರಾರು ಕೋಟಿ ರೂ ಸಂಗ್ರಹವಾಗಿದೆ. ಅದಕ್ಕಿನ್ನೂ ಅನುಮತಿ ಸಿಕ್ಕಿಲ್ಲ. ಯಾರು ಅನುಮತಿ ಕೊಡುತ್ತಿಲ್ಲ ಎನ್ನುವುದು ಅಬಕಾರಿ ಸಚಿವರಿಗೆ ಗೊತ್ತಿದೆ. ಅವರೇ ಬಾಯಿ ಬಿಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯ ಸರ್ಕಾರದ ಪರಿಸ್ಥಿತಿ ನೋಡಿ ಮಲ್ಲಿಕಾರ್ಜುನ ಖರ್ಗೆ ಹತಾಶರಾಗಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವರು ಕೌಂಟರ್ ಗಳನ್ನು ತೆರೆದು ಕುಳಿತಿದ್ದಾರೆ. ಬಿ.ಆರ್.ಪಾಟೀಲ, ರಾಜು ಕಾಗೆ ಅವರನ್ನು ಕರೆದು ಮಾತನಾಡುವೆ ಎಂದು ಸಿಎಂ ಹೇಳಿದ್ದಾರೆ. ಎಲ್ಲ ಇಲಾಖೆಗಳು ಭ್ರಷ್ಟಾಚಾರದ ತಾಣವಾಗಿರುವುದು ಸಿದ್ದರಾಮಯ್ಯರಿಗೂ ಗೊತ್ತಿದೆ. ಕಿಂಚಿತ್ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸರ್ಕಾರದ ಬಳಿ ಹಣವಿಲ್ಲವೆಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಎಷ್ಟೊಂದು ತೆರಿಗೆ ಹೆಚ್ಚಳ ಮಾಡಿದ್ದಾರೆ. ಆ ಹಣವೆಲ್ಲ ಲೂಟಿಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಆಸಕ್ತಿ ಕಳೆದುಕೊಂಡಿದ್ದು, ನಿಯಂತ್ರಣವೂ ತಪ್ಪಿಹೋಗಿದೆ. ಭ್ರಷ್ಟಾಚಾರದ ವಿರುದ್ಧ ಪ್ರತಿಪಕ್ಷವಾಗಿ ಬಿಜೆಪಿ ಹೋರಾಡುತ್ತಲೇ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.