ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಿಂಗಳಿಗೆ 10 ಕೆ.ಜಿ ಅಕ್ಕಿ, 200 ಯುನಿಟ್ ವಿದ್ಯುತ್ ಉಚಿತ!

ಕಾಂಗ್ರೆಸ್ ನಾಯಕರು
Published on

ಬೆಳಗಾವಿ: ರಾಜ್ಯದಲ್ಲಿ ‌ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ.

ಬೆಳಗಾವಿ ಆಟೋ ನಗರದ ಅಂಜುಮನ್ ಮೈದಾನದಲ್ಲಿ ಬುಧವಾರ ಬೆಳಗಾವಿ ನಗರ ಮತ್ತು ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ‘ಪ್ರಜಾ ಧ್ವನಿ‘ ಸಮಾವೇಶದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು‌ ಉಚಿತ ಕೊಡುಗೆಗಳ ಮೂಲಕ ಜನರನ್ನು ಸೆಳೆಯಲು ಕೊಡುಗೆಗಳನ್ನು ಘೋಷಣೆ ಮಾಡಿದರು.

ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ಗ್ರಾಮೀಣ, ಕಿತ್ತೂರು, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ ಸೇರಿ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ ಸುಮಾರು 30 ಸಾವಿರಕ್ಕೂ ಅಧಿಕ ಜನರ ಭಾಗವಹಿಸಿದ್ದರು.

ಇದೇ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ, ಪ್ರಜಾ ಧ್ವನಿ ಕಾಂಗ್ರೆಸ್ ಧ್ವನಿ ಅಲ್ಲ. ಅದು 7 ಕೋಟಿ ಕನ್ನಡಿಗರ ಧ್ವನಿ. ಜನರ ಸಮಸ್ಯೆಗಳನ್ನು ಆಲಿಸಲು, ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನಿತಿಗಳನ್ನು ಜನರ ಮುಂದಿಡಲು ಪ್ರಜಾ ಧ್ವನಿ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರ ಯಾವತ್ತು ಅಧಿಕಾರಕ್ಕೆ ಬರಬಾರದು. ಹೀಗಾಗಿ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ನಮ್ಮ ಸರ್ಕಾರ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ 130 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ‌ಬರಲಿದೆ. ‌ಬಳಿಕ ಎಲ್ಲ ವರ್ಗದ ಜನರಿಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ಕುಟುಂಬಕ್ಕೆ ಮಾಸಿಕ 1000 ರೂ. ಉಳಿತಾಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net