ಕಾಂಗ್ರೆಸ್ ಪ್ರತಿನಿಧಿ ಸಂಕಲ್ಪ ಸಮಾವೇಶ

samavesha
Published on

ಬಂಟ್ವಾಳ: ಪಕ್ಷದ ಸಿದ್ಧಾಂತ ಹಾಗೂ ಗುರಿಯನ್ನು ದೂರ ಇಟ್ಟಾಗ ಸೋಲು ಅನುಭವಿಸಬೇಕಾಗುತ್ತದೆ. ಏನೇ ಒತ್ತಡ ಇದ್ದರೂ ಪಕ್ಷದ ಸಿದ್ಧಾಂತ ಹಾಗೂ ಗುರಿಯನ್ನು ಜತೆಯಾಗಿಟ್ಟುಕೊಂಡೇ ಮುಂದೆ ಹೋಗಬೇಕು. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಂಡು ಮುನ್ನಡೆದಾಗ ಜಯ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಾಣೆಮಂಗಳೂರಿನಲ್ಲಿ ಆಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಪ್ರತಿನಿಧಿ ಸಂಕಲ್ಪ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ ಆತ ಎಷ್ಟು ನಾಯಕರನ್ನು ಸೃಷ್ಟಿ ಮಾಡಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. ಪ್ರತೀ ಬೂತ್‌ನಲ್ಲಿ, ಪಂಚಾಯಿತಿ ಮಟ್ಟದಲ್ಲಿ ಹೊಸ ನಾಯಕರನ್ನು ಸೃಷ್ಟಿಸಿ, ಯುವಕರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಕರೆ ನೀಡಿದರು. ಇದು ಹೋರಾಟ ಹಾಗೂ ಸಂಘಟನೆಯ ವರ್ಷ. ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಗಂಭೀರ ಹೋರಾಟಗಳಾಗಬೇಕು. ಮುಂದಿನ ದಿನಗಳಲ್ಲಿ 100ರಿಂದ 150 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತ್ತಾವಿಕವಾಗಿ ಮಾತನಾಡಿ, ದ.ಕ. ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಬಿಜೆಪಿ ಮತೀಯ ವಿಚಾರಗಳನ್ನು ಭಿತ್ತಿ, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಚುನಾವಣೆಯಲ್ಲಿ ಗೆಲುವು ಪಡೆದಿದೆ. ಜಾತ್ಯತೀತ ಚಿಂತನೆ ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉತ್ತುಂಗಕ್ಕೇರಿಸುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮ್ಮದ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್, ಡಿ.ಕೆ. ತಾರಾದೇವಿ, ಬಿ.ಎಲ್. ಶಂಕರ್, ವಿನಯಕುಮಾರ್ ಸೊರಕೆ, ಮೋಟಮ್ಮ, ಉಗ್ರಪ್ಪ, ಯು.ಟಿ.ಖಾದರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಮತ್ತಿತರರಿದ್ದರು.

ಕಾರ್ಯಕರ್ತರ ಧ್ವನಿ ಅಧ್ಯಕ್ಷ:

ಮೊದಲು ನಾವು ಪಕ್ಷದ ಕಾರ್ಯಕರ್ತರು; ಆ ಬಳಿಕ ನಾಯಕರು. ಕಾರ್ಯಕರ್ತರ ಧ್ವನಿ ಪಕ್ಷದ ನಾಯಕರ, ಅಧ್ಯಕ್ಷರ ಧ್ವನಿಯಾಗಬೇಕು, ನಾಯಕರ ಧ್ವನಿ ಪಕ್ಷದ ಧ್ವನಿಯಾಗಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿರುವ ಜನರ ಧ್ವನಿ ತಿಳಿದು ಜನಪರ ಹೋರಾಟ ರೂಪಿಸಬೇಕು. ರೈತ ಬೀಜ ಬಿತ್ತಿ ಶ್ರಮ ವಹಿಸಿ ಬೆಳೆ ತೆಗೆಯುವಂತೆ ಪಕ್ಷದ ನಾಯಕರು ಚುನಾವಣೆ ಸಂದರ್ಭ ಮಾತ್ರ ಹಾಜರಾಗದೆ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಅಧಿಕಾರ ಸುಮ್ಮನೆ ಬರುವುದಿಲ್ಲ. ಅದರ ಬಗ್ಗೆ ಮಂಥನ, ಚರ್ಚೆಯಾಗಬೇಕು ಎಂದು ಶಿವಕುಮಾರ್ ಕರೆ ನೀಡಿದರು.

3 ನಿಮಿಷದ ಅವಕಾಶ: ಪ್ರತಿನಿಧಿ ಸಮಾವೇಶಕ್ಕೆ ಬಂದಿರುವ ಎಲ್ಲ ಪ್ರತಿನಿಧಿಗಳಿಗೂ 3 ನಿಮಿಷ ಕಾಲಾವಕಾಶವಿದ್ದು, ಸ್ಥಳೀಯ ಸಮಸ್ಯೆ, ಪಕ್ಷ ಸಂಘಟನೆ ಹಾಗೂ ಹೋರಾಟದ ಬಗ್ಗೆ ತಿಳಿಸಬೇಕು. ಇದು ಭಾಷಣದ ವೇದಿಕೆಯಲ್ಲ, ವೈಯಕ್ತಿಕ ಆರೋಪಗಳಿಗೂ ಅವಕಾಶವಿಲ್ಲ ಎಂದು ಡಿಕೆಶಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net