

GST Reforms: ಕೇಂದ್ರ ಸರ್ಕಾರ ಸಾಮಾನ್ಯ ಜನರಿಂದ ತೆರಿಗೆ ಸಂಗ್ರಹಿಸುವುದನ್ನೆ ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
2005 ಫೆಬ್ರವರಿ 28 ರಂದು, ಯುಪಿಎ ಸರ್ಕಾರ ಲೋಕಸಭೆಯಲ್ಲಿ ಔಪಚಾರಿಕವಾಗಿ ಜಿಎಸ್ಟಿಯನ್ನು ಘೋಷಿಸಿತ್ತು. 2011 ರಲ್ಲಿ, ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಜಿಎಸ್ಟಿ ಮಸೂದೆಯನ್ನು ಮಂಡಿಸಿದಾಗ, ಬಿಜೆಪಿ ಅದನ್ನು ವಿರೋಧಿಸಿತು. ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಎಸ್ಟಿಯನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ತಿಳಿಸಿದರು. ಇಂದು, ಅದೇ ಬಿಜೆಪಿ ಸರ್ಕಾರವು ಸಾಮಾನ್ಯ ಜನರಿಂದ ತೆರಿಗೆ ಸಂಗ್ರಹಿಸುವುದು ಒಂದು ದೊಡ್ಡ ಸಾಧನೆಯಂತೆ ದಾಖಲೆಯ ಜಿಎಸ್ಟಿ ಸಂಗ್ರಹವನ್ನು ಆಚರಿಸುತ್ತಿದೆ ಎಂದರು.
ಇದನ್ನೂ ಓದಿ:ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು
ಜಿಎಸ್ಟಿ ಸುಧಾರಣೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕೊನೆಗೂ ಕೇಂದ್ರ ಸರ್ಕಾರ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಲಹೆಯನ್ನು ಪಾಲಿಸಿದೆ ಎಂದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಖೇರಾ, ರಾಹುಲ್ ಗಾಂಧಿ ಈ ಹಿಂದೆ ಮಾಡಿದ್ದ ಸರಣಿ ಟ್ವೀಟ್ಗಳನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ ಅವರು ಹಿಂದಿನ ತೆರಿಗೆ ರಚನೆಯನ್ನು "ಗಬ್ಬರ್ ಸಿಂಗ್ ತೆರಿಗೆ" ಎಂದು ಟೀಕಿಸಿದ್ದರು. ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ತೆರಿಗೆ ದೃಷ್ಟಿಕೋನವು, ಒಂದು ರಾಷ್ಟ್ರ, 9 ತೆರಿಗೆಗಳಾಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ 2019 ಮತ್ತು 2024 ರ ಚುನಾವಣಾ ಪ್ರಣಾಳಿಕೆಗಳಲ್ಲಿ ಎಂಎಸ್ಎಂಇಗಳು ಮತ್ತು ಸಣ್ಣ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿರುವ ಜಿಎಸ್ಟಿ ವ್ಯವಸ್ಥೆಯನ್ನು ಸರಳಗೊಳಿಸುವ ಭರವಸೆ ನೀಡಿತ್ತು.(ಏಜೆನ್ಸೀಸ್)