ಲೋಕ ಸಮರ 2024: ವೀಣಾ ಅಸಮಾಧಾನದ ಮಧ್ಯೆಯೂ ಸಂಯುಕ್ತಾ ಬಿರುಸಿನ ಮತಬೇಟೆ!

WhatsApp-Image-2024-04-07-at-1.42.57-PM
Published on

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಉಳಿದಿರುವುದು ಕೇವಲ ಕೆಲವೇ ದಿನಗಳು ಮಾತ್ರ. ಆದರೂ ಸಹ ಬಾಗಲಕೋಟೆ ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ್ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್​ ಪತ್ನಿ ವೀಣಾ ಕಾಶಪ್ಪನವರ್​ ನಡುವಿನ ಟಿಕೆಟ್ ಮುನಿಸು ಯಾಕೋ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಇದೆಲ್ಲದರ ಮಧ್ಯೆಯೇ ಸಂಯುಕ್ತಾ ಬಿರುಸಿನ ಮತಬೇಟೆ ಆರಂಭಿಸಿದ್ದಾರೆ.

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಕೈತಪ್ಪಿದ್ದು ವೀಣಾ ಅಸಮಾಧಾನಕ್ಕೆ ಪ್ರಮುಖ ಕಾರಣವಾಯಿತು. ಅಂದಿನಿಂದಲೂ ಇಂದಿನವರೆಗೆ ಯಾವುದೇ ಸಭೆ, ಕಾರ್ಯಕ್ರಮದಲ್ಲಿ ಸಂಯುಕ್ತಾ ಪರ ಅಥವಾ ಜತೆಗೆ ಕಾಣಿಸಿಕೊಳ್ಳುವಲ್ಲಿ ವೀಣಾ ಗೈರಾಗುತ್ತಿದ್ದಾರೆ. ಈ ಮೂಲಕ ತನ್ನ ಟಿಕೆಟ್ ಅಸಮಾಧಾನ ಇನ್ನೂ ಮುಗಿದಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ನಿನ್ನೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ವೀಣಾ, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಂದು ಹೇಳಿದ್ದಾರೆ. ಕೆಲವರು ಪಕ್ಷದಲ್ಲಿ ಸ್ಥಾನಮಾನ ನೀಡಿ ಎಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ. ಇನ್ನು ಕೆಲವರು ತಟಸ್ಥರಾಗಿ ಉಳಿಯಿರಿ ಎಂದು ಹೇಳುತ್ತಿದ್ದಾರೆ. ಆದರೆ, ಇದೆಲ್ಲವನ್ನು ಮೀರಿ ನನ್ನ ನಿರ್ಧಾರವೇನು ಎಂಬುದುನ್ನು ಯುಗಾದಿ ಹಬ್ಬದ ಬಳಿಕ ತಿಳಿಸುತ್ತೇನೆ ಎಂದು ಹೇಳಿದರು.

ಅತ್ತ ಸಂಯುಕ್ತಾ ಪಾಟೀಲ್​ ಪರ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದು, ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರ ಮತಯಾಚನೆ ಶುರುಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್. ಪಾಟೀಲ್, ಶಾಸಕ ಹೆಚ್. ವೈ. ಮೇಟಿ, ಜೆ.ಟಿ. ಪಾಟೀಲ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸಂಯುಕ್ತಾ ಸೇರಿದಂತೆ ಸ್ಥಳೀಯ ನಾಯಕರು ಭಾಗಿಯಾಗಿ ಬಿರುಸಿನ ಮತಬೇಟೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net