

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳ ವಿಚಾರದಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ಗದ್ದಲ ಮುಗಿಲುಮುಟ್ಟಿದೆ. ಈ ನಡುವೆ ಮತ್ತೊಂದು ಪ್ರಮುಖ ಪ್ರತಿಸ್ಪರ್ಧಿ ಎಂದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಒಕ್ಕೂಟ. ಇದೀಗ ಕಾಂಗ್ರೆಸ್ ಬಂಗಾಳದಲ್ಲಿ ತನ್ನ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಹೊರಟಿದ್ದು, 30 ಸ್ಟಾರ್ ಕಾಂಪೇನರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪ್ರಚಾರಕರ್ತರ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಚಿನ್ ಪೈಲಟ್, ನವಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ ಮತ್ತು ಮೊಹಮ್ಮದ್ ಅಜರುದ್ದೀನ್ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಭೂಪೇಶ್ ಬಾಗೇಲ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಕಾಂಗ್ರೆಸ್ನ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಜಿ -23 ಸದಸ್ಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಜಿ-23 ನಾಯಕರು, 'ಬಲಹೀನಗೊಳ್ಳುತ್ತಿರುವ ಕಾಂಗ್ರೆಸ್ಗೆ ಪರಿಣಾಮಕಾರಿ ನೇತೃತ್ವದ ಅಗತ್ಯ ಇದೆ' ಎಂದು ಇತ್ತೀಚೆಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷಕ್ಕೆ ಮುಜುಗರದ ಸನ್ನಿವೇಶ ಉಂಟುಮಾಡಿದ್ದರು.
ಅಧಿಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಆಜಾದ್ರಂಥ ನಾಯಕರನ್ನು ಪ್ರಚಾರಕ್ಕೆ ಬಳಸದೆ ಇರಲು ಕಾಂಗ್ರೆಸ್ ಮುಂದಾಗಿದೆ. ಮಾಜಿ ಕ್ರಿಕೆಟಿಗ ಅಜರುದ್ದೀನ್ ಮತ್ತು ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಅವರನ್ನು ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿ ಆಜಾದ್ರ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ