ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಗೆ ಕಾಂಗ್ರೆಸ್ ಯತ್ನ

BJP Congress
Published on

ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಬೀದಿಗಿಳಿದು ಹೋರಾಟ ನಡೆಸುತ್ತಿರುವ ಕಾಂಗ್ರೆಸ್, ಮಂಗಳವಾರ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ಪ್ರಸಂಗ ನಡೆಯಿತು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಮಂಜುನಾಥ್ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಮಲ್ಲೇಶ್ವರಂ ಎಂಟನೇ ಮೇನ್ ರಸ್ತೆಯಲ್ಲಿ ಸಾಗಿ ಬಂದು ಬಿಜೆಪಿ ಕಚೇರಿಯತ್ತ ಸಾಗಿ ಬರಲು ಪ್ರಯತ್ನಿಸಿದಾಗ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು. ನಂತರ ಅವರನ್ನೆಲ್ಲ ಬಂಧಿಸಿದ ಪೊಲೀಸರು ಸ್ಥಳಾಂತರ ಮಾಡಿದರು.
ಈ ಮಧ್ಯೆ ಪ್ರತಿಕ್ರಿಯೆ ನೀಡಿದ ಬಿ.ವಿ. ಶ್ರೀನಿವಾಸ್, ಪ್ರಜ್ವಲ್ ಮೋದಿಯವರ ಪರಿವಾರದವರು. ಬಿಜೆಪಿ ನಾಯಕರು ಈ ವಿಷಯದಲ್ಲಿ ಮಾತನಾಡುತ್ತಲೇ ಇಲ್ಲ. ಮೋದಿ ಕೂಡ ಬೇಟಿ ಬಚಾವೋ ಬೇಟಿ ಪಡಾವೋ ಅನ್ನುತ್ತಾರೆ. ಈ ಪ್ರಕರಣದಲ್ಲಿ ಪ್ರಕ್ರಿಯೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳುವುದಕ್ಕೂ ಕೇಂದ್ರ ಸಹಕಾರ ನೀಡಿದೆ. ಮುಂಚಿತವಾಗಿ ವಿಷಯ ಗೊತ್ತಿದ್ದರೂ ತಮ್ಮ ಮೈತ್ರಿ ಪಕ್ಷದ ಸಂಸದ ತಲೆ ಮರೆಸಿಕೊಳ್ಳಲು ಸಹಕಾರ ನೀಡಿದ್ದಾರೆಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net