

ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಪ್ರಚಾರ ಉಸ್ತುವಾರಿಗಳ ನೇಮಕ ಮಾಡಿದೆ. ಅಲ್ಲದೇ, ಪ್ರಚಾರದ ಮೇಲೆ ಕಣ್ಗಾವಲು ವ್ಯವಸ್ಥೆಯನ್ನೂ ಮಾಡಿದೆ.
ಶಿಗ್ಗಾಂವಿಗೆ ಸಚಿವರಾದ ಈಶ್ವರ್ ಖಂಡ್ರೆ, ಎಚ್.ಕೆ ಪಾಟೀಲ್ ಪಾಟೀಲ್, ಜಮೀರ್, ಹೆಬ್ಬಾಳ್ಕರ್, ಆರ್.ಬಿ.ತಿಮ್ಮಾಪೂರ, ಎಸ್.ಎಸ್.ಮಲ್ಲಿಕಾರ್ಜುನ, ಬೈರತಿ ಸುರೇಶ್, ಶಿವರಾಜ್ ತಂಗಡಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಈ ಸಚಿವರೊಂದಿಗೆ 29 ಪ್ರಮುಖ ಸದಸ್ಯರ ತಂಡ ರಚನೆ ಮಾಡಲಾಗಿದೆ.
ಸಂಡೂರು ಕ್ಷೇತ್ರಕ್ಕೆ ಸಚಿವರಾದ ಕೆ.ಎಚ್.ಮುನಿಯಪ್ಪ, ಜಾರ್ಜ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಸೇರಿ ಶಾಸಕರ ತಂಡ ರಚನೆ ಮಾಡಿದ್ದು, ಒಟ್ಟು 19 ಪ್ರಮುಖ ಸದಸ್ಯರು ತಂಡದಲ್ಲಿದ್ದಾರೆ. ಹಾಗೆಯೇ ಚನ್ನಪಟ್ಟಣ ಕ್ಷೇತ್ರಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಒಟ್ಟಾರೆ ರಾಜ್ಯದ 224 ವಿಧಾನ ಸಭಾಕ್ಷೇತ್ರದ ಪ್ರಮುಖ ನಾಯಕರನ್ನೂ ಈ ಮೂರು ಕ್ಷೇತ್ರಕ್ಕೆ ಹಂಚಿಕೆ ಮಾಡಿ ಹೊಣೆ ನಿಗದಿ ಮಾಡಲಾಗಿದೆ.
ಈ ಉಪ ಚುನಾವಣೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ಈ ಮೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಆಯ್ಕೆಯಾಗುವಂತೆ ನಾವೆಲ್ಲರೂ ಶ್ರಮಿಸಬೇಕಿದೆ. ಈ ಕಾರಣಕ್ಕೆ ಕೆಪಿಸಿಸಿ ವ್ಯವಸ್ಥಿತವಾಗಿ ಪ್ರಚಾರ ನಡೆಸಲು, ಪಕ್ಷದ ಚುನಾವಣಾ ಕಾರ್ಯತಂತ್ರ ಯಶಸ್ವಿಗೊಳಿಸಲು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಮತ್ತು ಮುಖಂಡರನ್ನು ಪ್ರಚಾರ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಯಾರಿಗೆಲ್ಲ ಜವಾಬ್ದಾರಿ ನೀಡಲಾಗಿದೆಯೋ ಅವರೆಲ್ಲರೂ ಕೂಡಲೇ ಜವಾಬ್ದಾರಿ ವಹಿಸಿಕೊಂಡು ನಿಯೋಜಿತ ಕ್ಷೇತ್ರ ಅಥವಾ ಸ್ಥಳಕ್ಕೆ ಭೇಟಿ ಕೊಡಬೇಕು. ಅಲ್ಲಿನ ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ವ್ಯವಸ್ಥಿತ ರೀತಿಯಲ್ಲಿ ಪ್ರಚಾರಕ್ಕೆ ಅಣಿಮಾಡಬೇಕು. ಪ್ರಚಾರದ ಅಂತ್ಯಗೊಳ್ಳುವ ದಿನದ ವರೆಗೂ ಆ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರಚಾರಕ್ಕೆ ಸಂಬಂಧಪಟ್ಟ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಲು ಕೆಪಿಸಿಸಿಯಿಂದ ಕ್ಯಾಂಪ್ ಆಫೀಸ್ ಸ್ಥಾಪಿಸಲಾಗಿರುತ್ತದೆ. ಈ ಕಚೇರಿಯಲ್ಲಿ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳೊಂದಿಗೆ ವಾರ್ ರೂಂ ಸದಸ್ಯರು, ಕಂಟ್ರೋಲ್ ರೂಂ ಸದಸ್ಯರು, ಕಾನೂನು ಘಟಕದ ಸದಸ್ಯರು, ಸಾಮಾಜಿಕ ಜಾಲತಾಣದ ತಂಡ ಕಾರ್ಯನಿರ್ವಹಿಸಲಿದೆ.
ಅದೇ ರೀತಿ ಚುನಾವಣೆ ಜವಾಬ್ದಾರಿ ಹೊತ್ತವರು ಪ್ರಚಾರ ಕಾರ್ಯಗಳ ವಿವರಗಳನ್ನು ಪ್ರತಿ ನಿತ್ಯ ಕ್ಯಾಂಕ್ ಪಚೇರಿ ಹಾಗೂ ಬೆಂಗಳೂರು ಕಚೇರಿಗೆ ವರದಿ ನೀಡಬೇಕಾಗುತ್ತದೆ.