ಸೈಕಲ್ ತುಳಿದು ಅಣಕಿಸಿದ ಕೈ ನಾಯಕರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ವಿರೋಧ

7-klr-2
Published on

ಕೋಲಾರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಸೈಕಲ್ ಜಾಥಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಅನುಸರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಕಾಂಗ್ರೆಸ್ ಭವನದ ಮುಂಭಾಗದಿಂದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸೈಕಲ್ ಏರಿ ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗಾಂಧಿವನ ಹಾಗೂ ಬಂಗಾರಪೇಟೆ ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದವರೆಗೆ ಜಾಥಾ ನಡೆಸಿದರು.

ಪೆಟ್ರೋಲ್ 100 ನಾಟೌಟ್ ಬರಹವುಳ್ಳ ಪೆಟ್ರೋಲ್ ಬಂಕ್ ಮಾದರಿಯನ್ನು ಎತ್ತಿನ ಬಂಡಿಯಲ್ಲಿಟ್ಟು ಮೆರವಣಿಗೆ ನಡೆಸಿ ತೈಲ ಬೆಲೆ ಹೆಚ್ಚಳವನ್ನು ಅಣಕಿಸಿದರು.ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸಭಾಪತಿ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ದೇಶದಲ್ಲಿ ನಡೆಯುತ್ತಿರುವ ಆಡಳಿತದ ದುರವಸ್ಥೆಗೆ ಜನಸಾಮಾನ್ಯರು, ರೈತರು ತತ್ತರಿಸಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಕಾರ್ಯವೈಖರಿ ದುರಾಡಳಿತದಿಂದ ಕೂಡಿದೆ. ಕೋವಿಡ್ ಲಾಕ್ ಡೌನ್ ಹೇರಿದ ಸರ್ಕಾರ ಕಷ್ಟದಲ್ಲಿ ಜನರ ನೆರವಿಗೆ ಧಾವಿಸುವ ಕೆಲಸ ಮಾಡಲಿಲ್ಲ ಎಂದು ದೂರಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100ರ ಗಡಿ ದಾಟಿ ಮುನ್ನಡೆದಿದ್ದು, ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ತೈಲಬೆಲೆ ಹೆಚ್ಚಳ ಎಲ್ಲ ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಜನರ ಜೀವನ ಮಟ್ಟ ಕುಸಿಯುತ್ತಿದೆ. ಈ ಕೂಡಲೆ ತೆರಿಗೆ ಇಳಿಸುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ, ಅನಿಲ ಬೆಲೆ ಏರಿಸಿ ಬಡವರು, ಜನಸಾಮಾನ್ಯರ ಪಾಲಿಗೆ ಮಾರಕ ನಡೆ ಪ್ರದರ್ಶಿಸಿದೆ. ಸರ್ಕಾರಗಳ ದುರಾಡಳಿತದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪಕ್ಷದಿಂದ ಸೈಕಲ್ ಜಾಥಾ ನಡೆಸಿ ಗಮನ ಸೆಳೆಯಲಾಗುತ್ತಿದೆ ಎಂದರು.

ಕೆಪಿಸಿಸಿಯಿಂದ ಆಗಮಿಸಿದ ಉಸ್ತುವಾರಿಗಳಾದ ಮುಲಾಜಮ್ಮ, ಕಾಂಚೇಗೌಡ, ಮದನ್ ಪಾಟೀಲ್, ರಾಜ್ಯ ಕಾರ್ಯದರ್ಶಿ ಬಲರಾಮ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ವಕ್ತಾರರಾದ ಎಲ್.ಎ.ಮಂಜುನಾಥ್, ದಳಸನೂರು ಗೋಪಾಲಕೃಷ್ಣ, ಸ್ಟ್ಯಾಂಡ್ಲಿ, ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್.ಮಂಜುನಾಥ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಅಲ್ಪಸಂಖ್ಯಾತ ಘಟಕದ ಇಕ್ಬಾಲ್ ಅಹಮದ್, ಮುಖಂಡರಾದ ಪ್ಯಾರೇಜಾನ್, ಕೆ.ಎನ್. ತ್ಯಾಗರಾಜ್, ಕುಮಾರ್, ಮುರಳಿ ಲಾಲ್‌ಬಹದ್ದೂರ್ ಶಾಸ್ತ್ರಿ ಇದ್ದರು.

ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಯಂತೆ ಕೆಲಸ ಮಾಡದೆ ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ಬೇಸತ್ತಿರುವ ಜನತೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಮುಂಬರುವ ಜಿಲ್ಲಾ, ತಾಪಂ ಚುನಾವಣೆಯಲ್ಲಿ ಇದರ ಸ್ಪಷ್ಟ ಫಲಿತಾಂಶ ಗೋಚರಿಸಲಿದೆ. ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net