ಬಿಜೆಪಿ ಭೂ ಹಂಚಿಕೆ ಕೈ ತನಿಖೆ: ಆರು ತಿಂಗಳ ಹಿಂದಿನ ಭೂಮಿ ಮಂಜೂರು ಪ್ರಕರಣಗಳ ಪರಾಮರ್ಶೆ

Land
Published on

ಬೆಂಗಳೂರು: ಬಿಜೆಪಿ ಸರ್ಕಾರದ ಟೆಂಡರ್​ಗಳು, ನೇಮಕ- ಪರೀಕ್ಷೆಗಳನ್ನು ತನಿಖೆಗೊಳಪಡಿಸಿ, ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೂ ಕೈಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಗೆ ಮಾಡಿದ ಭೂಮಿ ಹಂಚಿಕೆಯನ್ನು ಪರಾಮರ್ಶೆ ಗೊಳಪಡಿಸಲು ನಿರ್ಧರಿಸಿದ್ದಾರೆ.

ಈ ಹಿಂದಿನ ಸರ್ಕಾರವು ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗೆ ಬೇಕಾಬಿಟ್ಟಿಯಾಗಿ ಭೂಮಿ ಹಂಚಿಕೆ ಮಾಡಿದೆ ಎಂಬುದು ಕಾಂಗ್ರೆಸ್​ನ ಗುರುತರ ಆರೋಪ. ಹಾಗೆಯೇ ಸಂಪುಟ ಸದಸ್ಯರೂ ಈ ಬಗ್ಗೆ ದನಿ ಎತ್ತಿದ್ದಾರೆ. ಆರ್​ಎಸ್​ಎಸ್​ನ ಕಟುಟೀಕಾಕಾರರಾದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದ ಬಳಿಕವೂ ನಿರಂತರ ಮಾತನಾಡುತ್ತಲೇ ಇದ್ದಾರೆ. ಇದೀಗ ಬಿಜೆಪಿ ಸರ್ಕಾರದ ಕೊನೆಯ ಆರು ತಿಂಗಳ ಅವಧಿಯಲ್ಲಿ ಸಂಘ-ಸಂಸ್ಥೆಗಳಿಗೆ ಮಾಡಲಾದ ಭೂ ಹಂಚಿಕೆ ದಾಖಲೆಗಳನ್ನು ಸಂಪುಟದ ಮುಂದೆ ಮಂಡಿಸುವಂತೆ ಕಂದಾಯ ಸಚಿವರಿಗೆ ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆಯೂ ಈ ಸಂಬಂಧ ಕಡತ ಸಿದ್ಧಪಡಿಸುತ್ತಿದ್ದು, ಭೂ ಮಂಜೂರಾತಿ ಪಡೆದ ಸಂಘ ಸಂಸ್ಥೆಗಳು, ಅವುಗಳ ಹಿನ್ನೆಲೆ, ಭೂಮಿ ಪಡೆದ ಉದ್ದೇಶ, ಪಡೆದ ಉದ್ದೇಶಕ್ಕಾಗಿಯೇ ಬಳಕೆಯಾಗಿದೆಯೇ? ಮಂಜೂರಾತಿಗೆ ಅನುಸರಿಸಿದ ಮಾರ್ಗಗಳು, ನಿಯಮಗಳ ಉಲ್ಲಂಘನೆಯಾಗಿದೆಯೇ? ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ (ಡಿಸೆಂಬರ್​ನಿಂದೀಚೆಗೆ) ಯಾವ ಯಾವ ಸಂಸ್ಥೆಗೆ ಸರ್ಕಾರದಿಂದ ಭೂಮಿ ನೀಡಲಾಗಿದೆ ಎಂದು ಸಂಪುಟ ಸಭೆಗೆ ವರದಿ ಮಂಡಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರದ ಕೊನೆಯ ಹಂತದಲ್ಲಿ ತರಾತುರಿಯಾಗಿ ಭೂಮಿ ಹಂಚಿಕೆಯಾಗಿದೆ ಎಂಬ ಮಾಹಿತಿ ಇದೆ. ಆದರೆ, ಅನೇಕ ಆದೇಶವನ್ನು ಅಧಿಕಾರಿಗಳ ಹಂತದಲ್ಲೇ ತಡೆ ಹಿಡಿಯಲಾಗಿದೆ. ಕಳೆದ ಆರು ತಿಂಗಳಲ್ಲಾದ ಭೂಮಿ ಹಂಚಿಕೆ ನ್ಯಾಯಸಮ್ಮತವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಬೇಕಾಬಿಟ್ಟಿ ಹಂಚಿಕೆ: ಬಿಜೆಪಿಯವರು ಅಧಿಕಾರಾವಧಿಯಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ತಮ್ಮದೇ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದಾರೆ. ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದು ಸತ್ಯ ಎಂದ ಅವರು, ಸಿಎಂ ಹಾಗೂ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಲಿದೆ ಎಂದರು.

ಸರ್ಕಾರದ ಕೊನೇ ಅವಧಿಯಲ್ಲಿ ಮಂಜೂರಾದ ಭೂಮಿ

  • ರಾಷ್ಟ್ರೆೊತ್ಥಾನ ಪರಿಷತ್​ಗೆ ಚಾಮರಾಜನಗರ ಜಿಲ್ಲೆಯ ಯಡಪುರ ಗ್ರಾಮದಲ್ಲಿ ಐದು ಎಕರೆ
  • ಹಾವೇರಿ ಜಿಲ್ಲೆ ದೇವಗಿರಿಯಲ್ಲಿ ರಾಷ್ಟ್ರೆೊತ್ಥಾನಕ್ಕೆ 10 ಎಕರೆ
  • ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್​ಗೆ 10 ಎಕರೆ 3 ಗುಂಟೆ
  • ಚಿಕ್ಕಮಗಳೂರು ಜಿಲ್ಲೆ ಹಿರೇಮಗಳೂರಿನಲ್ಲಿ ರಾಷ್ಟ್ರೆೊತ್ಥಾನಕ್ಕೆ ಆರು ಎಕರೆ ಗುತ್ತಿಗೆ
  • ಯಲಹಂಕದ ತಿಮ್ಮಸಂದ್ರದಲ್ಲಿ ಲಾನ್ ಟೆನ್ನಿಸ್ ಅಸೋಸಿಯೇಷನ್​ಗೆ 7 ಎಕರೆ
  • ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ಹಾಸ್ಟೆಲ್​ಗೆ 1 ಎಕರೆ
  • ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆಲ್ದೂರು ಹೋಬಳಿ ಮಾಚಗೌಡನಹಳ್ಳಿಯಲ್ಲಿ 3.10 ಎಕರೆ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್​ಗೆ 30 ಗುಂಟೆ
  • ಬೆಳಗಾವಿಯಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್​ಗೆ 22 ಗುಂಟೆ
  • ಹೊಸನಗರ ತಾಲೂಕು ರಿಪ್ಪನ್​ಪೇಟೆಯ ಕ್ಷತ್ರಿಯ ಮರಾಠ ಯುವ ವೇದಿಕೆಗೆ ಮಕ್ಕಳ ಹಾಸ್ಟೆಲ್​ಗಾಗಿ ಎರಡು ಎಕರೆ
  • ಗದಗ ಜಿಲ್ಲೆ ನರಗುಂದದಲ್ಲಿ ಲಿಂಗಾಯತ ಪಂಚಮಸಾಲಿ ವಿವಿಧೋದ್ದೇಶ ಸಮಾಜಕ್ಕೆ 2 ಎಕರೆ
  • ಹುಲಿಮಂಗಲ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ 1.36 ಎಕರೆ
  • ಮೈಸೂರು ಜಿಲ್ಲೆ ಕೆ.ಆರ್.ನಗರದ ಕಾಳೇನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಜ್ಞಾನ ಜ್ಯೋತಿ ಟ್ರಸ್ಟ್​ಗೆ 15 ಗುಂಟೆ
  • ಚಿತ್ರದುರ್ಗ ಜಿಲ್ಲೆಯ ಅಮೃತ್ ಮಹಲ್ ಕಾವಲ್ ಯೋಜನೆಗೆ ಕಾಯ್ದಿರಿಸಿದ ವಿವಿಧ ಸಂಸ್ಥೆಗೆ ಹಂಚಿಕೆ
  1. ಸಂಘ ಪರಿವಾರದ ಯಾವೆಲ್ಲ ಸಂಸ್ಥೆಗೆ ಜಾಗ ನೀಡಲಾಗಿದೆ?
  2. ಕಾನೂನು, ನಿಯಮ ಉಲ್ಲಂಘಿಸಲಾಗಿದೆಯೇ?
  3. ಭೂಮಿ ಪಡೆದ ಸಂಸ್ಥೆಗಳ ಹಿನ್ನೆಲೆ ಮತ್ತು ಭೂಮಿ ಪಡೆದ ಉದ್ದೇಶವೇನು?
  4. ಭೂಮಿಯನ್ನು ಯಾವ ಮೊತ್ತಕ್ಕೆ ಪಡೆಯಲಾಗಿದೆ?
  5. ಮೇಲಿಂದ ಮೇಲೆ ಭೂಮಿ ಪಡೆದ ಸಂಸ್ಥೆಗಳು ಯಾವುವು?

ಸರ್ಕಾರದ ಭೂಮಿ ಅರ್ಹರಿಗೆ ಸಿಗಬೇಕು. ಯಾವುದೇ ಸಂಘ ಟನೆಯಾದರೂ ಆಗಿರಲಿ, ಸರಿಯಾದ ಉದ್ದೇಶಕ್ಕೆ ಬಳಸುತ್ತಾರೆಯೇ ಎಂಬುದು ಮುಖ್ಯ. ಸದುದ್ದೇಶವಾಗಿದ್ದರೆ ಗೌರವಿಸ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯಾಗಿದ್ದರೆ, ಸೇವಾ ಹಿನ್ನೆಲೆ ನೋಡಬೇಕಾಗುತ್ತದೆ. | ಕೃಷ್ಣಬೈರೇಗೌಡ, ಕಂದಾಯ ಸಚಿವ ನಮ್ಮ ಸರ್ಕಾರದಲ್ಲಿ ಕಾನೂನುಬಾಹಿರವಾಗಿ ಯಾವ ಭೂ ಹಂಚಿಕೆಯೂ ನಡೆದಿಲ್ಲ. ಸಂಘದ ಮಾರ್ಗದರ್ಶನದ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಿಗೆ ಭೂಮಿ ಮಂಜೂರು ಮಾಡಲಾಗಿದೆ. ಬಿಜೆಪಿ ಹಾಗೂ ಸಂಘವನ್ನು ಟೀಕಿಸುವ ಭರದಲ್ಲಿ ಇಂತಹ ಕೆಲಸಕ್ಕೆ ಕೈಹಾಕುವುದು ಸರಿಯಲ್ಲ. | ಕೋಟ ಶ್ರೀನಿವಾಸಪೂಜಾರಿ, ಮಾಜಿ ಸಚಿವ

ಸದುದ್ದೇಶ ಗೌರವಿಸುತ್ತೇವೆ..

ಆರ್​ಎಸ್​ಎಸ್​ಗೆ ಬೇಕಾಬಿಟ್ಟಿಯಾಗಿ ಭೂಮಿ ನೀಡಲಾಗಿದೆ, ಅದರ ಪರಾಮರ್ಶೆಯಾಗಬೇಕು ಎಂದು ಸಂಪುಟ ಸಹೋದ್ಯೋಗಿಯೇ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಭೂಮಿ ಅರ್ಹರಿಗೆ ಸಿಗಬೇಕು. ಯಾವುದೇ ಸಂಘಟನೆಯಾದರೂ ಆಗಿರಲಿ, ಸರಿಯಾದ ಉದ್ದೇಶಕ್ಕೆ ಬಳಸುತ್ತಾರೋ ಎಂಬುದು ಮುಖ್ಯ. ಸದುದ್ದೇಶವಾಗಿದ್ದರೆ ಗೌರವಿಸಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯಾಗಿದ್ದರೆ, ಸೇವಾ ಹಿನ್ನೆಲೆ ನೋಡಬೇಕಾಗುತ್ತದೆ ಎಂದರು. ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಪ್ರಕರಣ ಕೆದಕುತ್ತೀರಾ ಎಂಬುದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡ, ಆರು ತಿಂಗಳ ಹಿಂದಿನದ್ದೆಲ್ಲ ಕೆದಕುತ್ತಾ ಹೋದರೆ ಅದೇ ಕೆಲಸ ಆಗುತ್ತದೆ. ತೀರಾ ಹಿಂದೆ ತಪ್ಪಾದ ನಿರ್ದಿಷ್ಟ ಪ್ರಕರಣ ಗಮನಕ್ಕೆ ಬಂದರೆ ಮರುಪರಿಶೀಲನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net