

ಬೆಂಗಳೂರು: ರಾಜ್ಯ ಸರ್ಕಾರದ ವೈಲ್ಯದಿಂದ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಿದ್ದಾರೆ. ಆರು ತಿಂಗಳಲ್ಲೇ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿರುವುದು ಅವರಿಗೂ ಗೊತ್ತಾಗಿದೆ. ಇದರಿಂದಾಗಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಕರೆದಿದ್ದ ಸುದ್ದಿಗೋಷ್ಠಿಗೆ ನುಗ್ಗಿ ಗಲಾಟೆ ಮಾಡಿ ನಿಜಾಂಶ ಹೇಳಲು ಅಡ್ಡಿಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ವಿಮರ್ಶಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪರಿಶಿಷ್ಟ ಮಹಿಳೆ ವಿವಸ ಪ್ರಕರಣ, ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಘಟನೆ, ಸ್ವಪಕ್ಷದ ಶಾಸಕರ ಅಸಮಾಧಾನವು ಸರ್ಕಾರದ ವೈಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಬರಗಾಲದಿಂದ ರೈತರು, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿರುವಾಗ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುತ್ತಾ ಕಾಲ ಕಳೆದಿದೆ. ಇದೆಲ್ಲವನ್ನೂ ನೋಡಿದ ಕಾಂಗ್ರೆಸ್ ಕಾರ್ಯಕರ್ತರು ಭ್ರಮನಿರಸನರಾಗಿದ್ದಾರೆ ಎಂದು ಲೇವಡಿ ಮಾಡಿದರು.
ತುರ್ತಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ನೆರವಿನ ಮೊತ್ತ ಬಿಡುಗಡೆಯಾಗಿಲ್ಲ, ಪ್ರಧಾನಿ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ ಎನ್ನುವುದರಲ್ಲೇ ಕಾಲಹರಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಭೇಟಿಗೆ ಕಾಲಾವಕಾಶ ಕೊಡಿಸಿ ಎಂದು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಬ್ಬೆ ಹೊಡೆದರು. ಪ್ರಧಾನಿ ಮೋದಿಯವರನ್ನು ಮಂಗಳವಾರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿಯಾಗಿದೆ.
ಪ್ರಧಾನಿಗೆ ಮನವಿಪತ್ರ ಕೊಟ್ಟಿದ್ದರ ಬಗ್ಗೆ ನಾವು ದೂರುವುದಿಲ್ಲ. ಪರಿಹಾರ ಕೆಲಸವಿರಲಿ, ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಒಂದು ಬಿಡಿಗಾಸು ನೀಡದ ಕಾರಣ ಆಡಳಿತ ಪಕ್ಷದ ಶಾಸಕರು ಸಂದಿಗ್ಧಕ್ಕೆ ಸಿಲುಕಿ ಕ್ಷೇತ್ರಕ್ಕೆ ಕಾಲಿಡಲು ಸಮಸ್ಯೆಯಾಗಿದೆ ಎಂದು ಛೇಡಿಸಿದರು.
ದೇಶದ ಪ್ರಧಾನಮಂತ್ರಿಯವರ ನಡವಳಿಕೆಯನ್ನು ಕಾಂಗ್ರೆಸ್ ಮುಖಂಡ ಉಗ್ರಪ್ಪನವರನ್ನು ಕೇಳಿ ತೀರ್ಮಾನ ಮಾಡಲಾಗದು. ಬಿಜೆಪಿ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಧಾನಿ ಬಗ್ಗೆ ಹೆಮ್ಮೆಪಡುತ್ತಿದ್ದಾರೆ.
ಪ್ರಧಾನಿಗೆ ಸಿಎಂ ಭೇಟಿಯಾದ ಅರ್ಧ ತಾಸಿನಲ್ಲೇ ಉಗ್ರಪ್ಪ ಟೀಕಿಸಿರುವುದು ನೋಡಿದರೆ ಅವರಿಗೆ ಪರಿಹಾರ ಪಡೆಯುವುದಕ್ಕಿಂತ ರಾಜಕಾರಣವೇ ಮುಖ್ಯವಾದಂತಿದೆ ಎಂದು ಬಿ.ವೈ.ವಿಜಯೇಂದ್ರ ಕಾಲೆಳೆದರು.