ಗ್ಯಾರಂಟಿಗಳ ಜಾತ್ರೆಯಲ್ಲಿ ಭೀಕರ ಮರೆತ ಸರ್ಕಾರ; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

Published on

ಬೆಂಗಳೂರು: ಗ್ಯಾರಂಟಿಗಳ ಜಾತ್ರೆ, ನುಡಿದಂತೆ ನಡೆದಿದ್ದೇವೆ ಎಂಬ ಪ್ರಚಾರದ ಭರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಂಪರು ಕವಿದಿದೆ. 196 ತಾಲೂಕುಗಳು ಭೀಕರ ಬರದಿಂದ ತತ್ತರಿಸಿದ್ದರೆ, ರಾಜ್ಯ‌ ಸರ್ಕಾರ ತನ್ನ ಜವಾಬ್ದಾರಿ ಮರೆತುಬಿಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನುಡಿದಂತೆ ನಡೆದ ಸರ್ಕಾರವಲ್ಲ, ಎಡವಿದ ಸರ್ಕಾರ ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲಿ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದು ಕಟಕಿಯಾಡಿದರು.

ರೈತರು, ಜನರು ಸಮಸ್ಯೆ ಎದುರಿಸುತ್ತಿದ್ದು ಹಗುರವಾಗಿ ಪರಿಗಣಿಸಿರುವ ಸರ್ಕಾರ ಆಮೆ‌ ನಡಿಗೆಯಲ್ಲಿ ಸಾಗುತ್ತಿದೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗಲಿದೆ ಎಂದು ಬಿ.ವೈ.ವಿಜಯೇಂದ್ರ‌ ಎಚ್ಚರಿಸಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವಂತೆ ಬರ ಪರಿಸ್ಥಿತಿ ಕುರಿತು, ಮಾಧ್ಯಮಗಳಲ್ಲೂ ಸಾಕಷ್ಟು ವರದಿಗಳು ಬಂದಿವೆ. ಹವಾಮಾನ ಇಲಾಖೆ ‌ಮಳೆ ಕೊರತೆಯ ಮುನ್ಸೂಚನೆ ನೀಡಿತ್ತು. ಆದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ರೋಮ್ ಹೊತ್ತಿ ಉರಿಯುವಾಗ ದೊರೆ ನಿರೋ ಪೀಟೀಲು ಬಾರಿಸುತ್ತಿದ್ದ ರೀತಿಯಲ್ಲಿ ವರ್ತಿಸಿ, ಸಮೀಕ್ಷೆ ಹೆಸರಿನಲ್ಲಿ ಕಾಲಕಳೆಯುತ್ತಿದೆ.

ರೈತರು, ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅನ್ನಿಸುತ್ತಿಲ್ಲ. ಅದರ ಬದಲಾಗಿ ದಿಂದು ವೆಚ್ಷ, ಗ್ಯಾರಂಟಿ ಜಾತ್ರೆ ಮಾಡುತ್ತಿದ್ದಾರೆ. ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಮತ್ತು ಸಚಿವರು ಬರ ಪರಿಸ್ಥಿತಿ ಹಗುರವಾಗಿ ಪರಿಗಣಿಸಿರುವುದು ಸಚಿವರೊಬ್ಬರು ನೀಡಿದ ಹೇಳಿಕೆಯೇ ನಿದರ್ಶನ. ಹೆಚ್ಚು ಪರಿಹಾರಕ್ಕೋಸ್ಕರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವರು ಹೇಳಿದ್ದಾರೆ. ಅಧಿಕಾರದ ಮದ ನೆತ್ತಿಗೇರಿದೆ ಎಂದು ಜನ ಮಾತನಾಡುವಂತಾಗಿದೆ. ಕೂಡಲೇ ಆ ಸಚಿವರು ತಕ್ಷಣ ನಾಡಿನ ರೈತರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಲಾಕಿತನ

ಒಂದು ಕಡೆ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ತನ್ನ ತಾನು ಬೆನ್ನು ತಟ್ಟಿಕೊಳ್ಳುತ್ತಿದೆ. ಪ್ರತಿ ಹಂತದಲ್ಲೂ ಕೇಂದ್ರವನ್ನು ದೂರುತ್ತಿದೆ, ಅಕ್ಕಿ ವಿಚಾರದಲ್ಲೂ ಮೋದಿ ಟೀಕಿಸಿದ್ದರು ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತದೆ ಹಾಗಾಗಿ ಬಹಳ ಚಾಲಾಕಿನಿಂದ ಕೇಂದ್ರಕ್ಕೆ ಪತ್ರ ಬರೆದು ಬರದ ಮಾನದಂಡ ಸಡಿಲ ಮಾಡಿ ಎಂದು ಮನವಿ ಮಾಡಿದ್ದಾರೆ ಇದರ ಹಿಂದೆ ದುರುದ್ದೇಶ ಅಡಗಿದೆ, ಗ್ಯಾರಂಟಿ ಪೂರ್ಣ ಕಷ್ಟವಾಗಿದೆ, ಸರ್ಕಾರಿ ನೌಕರರಿಗೆ ವೇತನ ಕೊಡಲು ಆಗುತ್ತಿಲ್ಲ, ಅಕ್ಕಿ ಬದಲು ಹಣದ ಡಿಬಿಟಿ ಸೆಪ್ಟೆಂಬರ್ ನದು ಆಗಿಲ್ಲ, ಈಗ ಬರ ಮಾನದಂಡ ಸಡಿಲಕ್ಕೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಯಡಿಯೂರಪ್ಪ ಒಬ್ಬರದ್ದೇ ಸಂಪುಟ ಇದ್ದಾಗ ನೆರೆ ಸಂಭವಿಸಿತ್ತು ಆಗ ಕೇಂದ್ರದ ಪರಿಹಾರಕ್ಕೆ ಕಾಯದೆ ರಾಜ್ಯದಿಂದಲೇ ಪರಿಹಾರ ಕೊಟ್ಟರು. ಕಾಂಗ್ರೆಸ್ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿಯಿದ್ದರೆ ಕೂಡಲೇ ಬರ ಪೀಡಿತ ಪ್ರದೇಶ ಘೋಷಣೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದರು.

ಸೆ.8ಕ್ಕೆ ಬಿ ಎಸ್ ವೈ ನೇತೃತ್ವದಲ್ಲಿ ಹೋರಾಟ

ರೈತರ ವಿಚಾರ, ಕಾವೇರಿ ವಿಚಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಸೆ 8 ರಂದು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟ ನಡೆಯಲಿದೆ, ಜಿಲ್ಲಾ ಮಟ್ಟ ಮಂಡಲ ಮಟ್ಟದಲ್ಲಿಯೂ ಹೋರಾಟ ನಡೆಯಲಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾಟಕ ಮಾಡಿದರು. ಈಗ ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಎಷ್ಟು ಹಣ ಮೀಸಲಿಟಗಟಿದ್ದೀರಿ? ಕಾವೇರಿ ಹೋರಾಟಗಾರರ ದನಿಯನ್ನು ಹತ್ತಿಕ್ಕುವ ಕೆಲಸ ಈ ಸರ್ಕಾರ ಮಾಡುತ್ತಿದೆ, ಕನ್ನಡ ಪರ ಹೋರಾಟಗಾರರನ್ನೂ ಇಷ್ಟು ದಿನ ಎಲ್ಲಿದ್ದರು ಎನ್ನುತ್ತಿದ್ದಾರೆ. ಆ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾವೇರಿ ವಿಚಾರದಲ್ಲಿ ರೈತ ಸಂಘ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ ಈ ರಾಜ್ಯ ಸರ್ಕಾರ ಕಳ್ಳಾಟ ಆಡುತ್ತಿದೆ ಪ್ರಾಮಾಣಿಕವಾಗಿ ವಾದ ಮಂಡನೆ ಆಗುತ್ತಿಲ್ಲ, ಸತ್ಯಾಂಶ ಮರೆಮಾಚುವ ಆತಂಕ ಕಾಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲದೆ ರೈತ ಸಂಘ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಎಂದು ಸರ್ಕಾರದ ಕಾನೂನು ಹೋರಾಟವನ್ನೇ ಟೀಕಿಸಿದರು.

ಖಂಡನೀಯ ಧೋರಣೆ

ಇಂಡಿಯಾ ಬದಲು ಭಾರತ ಹೆಸರು ಬಳಕೆ ಕುರಿತು ಸಿದ್ದರಾಮಯ್ಯ ಸೇರಿ ಹಲವು ನಾಯಕರು ನಾನಾ ಹೇಳಿಕೆ ನೀಡುತ್ತಿದ್ದಾರೆ ಭಾರತದ ಪ್ರಧಾನಿ, ಭಾರತದ ರಾಷ್ಟ್ರಪತಿ ಎನ್ನುತ್ತಾರೆಯೇ ಹೊರತು ಇಂಡಿಯಾ ಪ್ರಧಾನಿ,ಇಂಡಿಯಾ ರಾಷ್ಟ್ರಪತಿ ಎನ್ನಲ್ಲ, ಇವರಿಗೆ ಭಾರತ ಎಂದು ಕರೆಯಲು ಅಸಹನೆ ಯಾಕೆ? ಎಲ್ಲ ದೇಶವಾಸಿಗಳು ಒಂದೇ ಕುಟುಂಬದವರು ಎಂದೇ ಮೋದಿ ತೆಗೆದುಕೊಂಡು ಹೋಗುತ್ತಿದ್ದರೂ ಇವರ ಇಂತಹ ಧೋರಣೆ ಖಂಡನೀಯ ಎಂದು ಭಾರತ ನಾಮಕರಣ ವಿಚಾರದಲ್ಲಿ ಪ್ರತಿಪಕ್ಷಗಳ ಧೋರಣೆಯನ್ನು ಖಂಡಿಸಿದರು.

ಹಿಂದು ಧರ್ಮ ಯಾವಾಗ ಹುಟ್ಟಿದ್ದು, ಯಾರು ಹುಟ್ಟಿಸಿದರು ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಆದರೆ ಅವರ ಹೆಸರಲ್ಲೇ ಪರಮೇಶ್ವರ ಇದ್ದಾನೆ ಅವರಿಗೆ ಈಗ ಯಾಕೆ ಈ ಅನುಮಾನ ಬಂತೋ ಗೊತ್ತಿಲ್ಲ, ಭೂಮಿಯ ಮೇಲೆ ಪ್ರಕೃತಿ ಹುಟ್ಟಿದಾಗಲೇ ಹಿಂದು ಧರ್ಮ ಹುಟ್ಟಿದೆ.ಪ್ರಕೃತಿಯನ್ನು ಯಾರು ಹುಟ್ಟಿಸಿದರು, ಯಾವಾಗ ಹುಟ್ಟಿತು ಎನ್ನುವ ಪ್ರಶ್ನೆ ಕೇಳಿದರೆ ಹೇಗೆ? ಇದಕ್ಕೆ ಉತ್ತರ ಸಿಗಲಿದೆಯಾ? ಎಂದು ಪರಮೇಶ್ವರ್ ಹೇಳಿಕೆಗೆ ವಿಜಯೇಂದ್ರ ಟಾಂಗ್ ನೀಡಿದರು.

ಬಿಜೆಪಿಯಲ್ಲಿ ಲಿಂಗಾಯತ ಕಡೆಗಣನೆ ವಿಚಾರ ಸತ್ಯಕ್ಕೆ ದೂರವಾಗಿದೆ, ಬಿಜೆಪಿ ಜಾತಿ ಆಧಾರಿತ ಪಕ್ಷ ಅಲ್ಲ, ಮೂರ್ನಾಲ್ಕು ದಶಕ ಯಡಿಯೂರಪ್ಪ ರಾಜ್ಯಾದ್ಯಂತ ಓಡಾಟ ಮಾಡಿ ನಗರಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದರು ಇದಕ್ಕೆ ಅನಂತ್ ಕುಮಾರ್, ಈಶ್ವರಪ್ಪ, ಶಂಕರಮೂರ್ತಿ ಸೇರಿ ಎಲ್ಲ ನಾಯಕರ ಹೋರಾಟದ ಶ್ರಮ ಇದೆ, ಜಾತಿಗೆ ಸೀಮಿತ ಮಾಡಿ ಮಾತನಾಡುವುದು ಸರಿಯಲ್ಲ ಎಂದರು.

ಬಿಜೆಪಿಯಲ್ಲಿ ನನ್ನ ಕಡೆಗಣನೆ ಪ್ರಶ್ನೆಯೇ ಇಲ್ಲ, ಪಕ್ಷ ನನಗೆ ಆಶೀರ್ವಾದ ಮಾಡಿ ಟಿಕೆಟ್ ನೀಡಿ ಶಾಸಕನಾಗಲು ಅವಕಾಶ ನೀಡಿದ್ದಾರೆ ಆದರೂ ನನಗೆ ಅನ್ಯಾಯವಾಗುದೆ ಎಂದು ಹೇಳಲು ಹೇಗೆ ಸಾಧ್ಯ. ಬಿಜೆಪಿ ನಾಯಕರು ಹಾಗೂ ಜಾತಿ ಆಧಾರಿತ ಪಕ್ಷವಲ್ಲ, ಕಾರ್ಯಕರ್ತರ ಆಧಾರಿತ ಪಕ್ಷ, ಲಕ್ಷಾಂತರ ಕಾರ್ಯಕರ್ತರು ಅವರ ಪಾದರಕ್ಷೆ ಸವೆಸಿ ಪಕ್ಷ ಕಟ್ಟಿದ್ದಾರೆ. ಇವತ್ತು ನಾವು ಅಧಿಕಾರದಲ್ಲಿ ಇಲ್ಲ ಆದರೆ ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ, ಶಂಕರಮೂರ್ತಿ ಸೇರಿ ಎಲ್ಲ ನಾಯಕರು ಪಕ್ಷ ಅಧಿಕಾರಕ್ಕೆ ಬರಲಿ ಎಂದು ಹೋರಾಟ ಮಾಡಲಿಲ್ಲ, ಜನರಿಗೆ ನೆರವು ನೀಡಲು ಕೆಲಸ ಮಾಡಿದರು. ಜನಾದೇಶದಂತೆ ಪಕ್ಷ ಅಧಿಕಾರಕ್ಕೆ ಬಂದಿತ್ತು ಎಂದು ಸಮಜಾಯಿಷಿ ನೀಡಿದರು.

ವರಿಷ್ಠರ ತೀರ್ಮಾನ

ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂದು ವರಿಷ್ಠರು ನಿರ್ಧರಿಸುತ್ತಾರೆ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡುವಂತೆ ಯಡಿಯೂರಪ್ಪ ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ, ಇಂತಹ ಪ್ರಶ್ನೆ ಉದ್ಭವವಾಗುವುದೇ ಇಲ್ಲ,ವರಿಷ್ಠರು ಕೇಳಿದರೆ ಅರ್ಹರಿಗೆ ಅವಕಾಶ ಕೊಡಿ ಎನ್ನುತ್ತಾರೆಯೇ ಹೊರತು ವಿಜಯೇಂದ್ರಗೆ ಕೊಡಿ ಎನ್ನಲ್ಲ ಎಂದರು.

ನಾನು ಸನಾತನಕ್ಕೆ ಹುಟ್ಟಿಲ್ಲ ಎನ್ನುವ ಪ್ರಕಾಶ್ ರಾಜ್ ಹೇಳಿಕೆ ಕುರಿತು ವ್ಯಂಗ್ಯವಾಡಿದ ವಿಜಯೇಂದ್ರ, ಪ್ರಕಾಶ್ ರಾಜ್ ಬಾಯಲ್ಲಿ ಯಾವತ್ತು ಒಳ್ಳೆಯ ಮಾತು ಬಂದಿದೆ, ಒಳ್ಳೆಯ ವಿಚಾರ ತಿಳಿಸಿದ್ದಾರೆ ಹೇಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net