ಮಳೆ ಬಾಧಿತ ಜನರ ಸಂಕಷ್ಟ ಕಡೆಗಣಿಸಿದ ಸರ್ಕಾರ: ವಿಜಯೇಂದ್ರ ವಾಗ್ದಾಳಿ

B Y Vijayendra
Published on

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದಿಂದ ಹೊರ ಬರುವ ಭ್ರಮೆಗೆ ಸಿಎಂ, ಡಿಸಿಎಂ, ಸಚಿವರು ಅಧೀನರಾಗಿ ತೀವ್ರ ಮಳೆ ಬಾಧಿತ ರೈತರು, ಬೆಂಗಳೂರಿನ ಜನರ ಸಂಕಷ್ಟ ನಿರ್ಲಕ್ಷಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರ ಇಡೀ ಮಂತ್ರಿ ಮಂಡಲ ತನ್ನ ಜವಾಬ್ದಾರಿ ಮರೆತುಬಿಟ್ಟಿದೆ. ಸರ್ಕಾರದ ನಿಷ್ಕ್ರಿಯತೆಯಿಂದ ಜನರು ಗೋಳು ಕೇಳುವವರಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಪರೀತ ಮಳೆಯಿಂದಾಗಿ ಬೆಳೆಗಳು ಹಾನಿಗೀಡಾಗಿವೆ. ತರಕಾರಿ ಮತ್ತಿತರ ತೋಟಗಾರಿಕೆ ಬೆಳೆಗಳು ಕೊಳೆತು ಹೋಗುವ ಸ್ಥಿತಿಯಲ್ಲಿವೆ. ಕಂಗಾಲಾಗಿರುವ ರೈತರ ಅಹವಾಲು ಆಲಿಸಲು ಬಾಧಿತ ಜಿಲ್ಲೆಗಳ ಸಚಿವರು ಹೋಗಿಲ್ಲ.

ವಾಲ್ಮೀಕಿ ನಿಗಮ, ಮುಡಾ ಪ್ರಕರಣದ ಬಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾತನಾಡುವ ಡಿಸಿಎಂ ಡಿ.ಕೆ.ಶಿವಕುಮಾರ್, ಆಕಾಶದೆತ್ತರ ಗೋಪುರ, ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ.

ಆದರೆ ಅಪಾರ್ಟ್‌ಮೆಂಟ್, ಮನೆಗಳಿಗೆ ನೀರು ನುಗ್ಗಿ ಜನರು ಬದುಕು ಬೀದಿಪಾಲಾಗಿದೆ. ಕಾರಿನಲ್ಲಿ ಓಡಾಡುತ್ತಿದ್ದವರು ದೋಣಿಗಳಲ್ಲಿ ಓಡಾಡುವಂತಹ ದುರ್ಗತಿಯನ್ನು ಪೂರ್ಣ ಪರಿಶೀಲಿಸುವಂತಹ ವ್ಯವಧಾನ ಇಲ್ಲವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹರಿಹಾಯ್ದರು.

ಗೆಲುವಿಗೆ ಕಾರ್ಯತಂತ್ರ

ಸಿ.ಪಿ.ಯೋಗೇಶ್ವರ್ ಎಲ್ಲ ಪಕ್ಷದವರೊಂದಿಗೆ ಸಂಪರ್ಕವಿತ್ತು. ರಾಜಕೀಯವಾಗಿ ಒಂದು ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಆದರೆ ಬಿಜೆಪಿ ತೊರೆದಿದ್ದರ ಬಗ್ಗೆ ಈಗ ಕೆದಕಿ ಚರ್ಚಿಸಬೇಕಾದ ಅಗತ್ಯವಿಲ್ಲವೆಂದರು.

ಯೋಗೇಶ್ವರ ಬಿಟ್ಟು ಹೋಗಿರುವುದರಿಂದ ಸಂಘಟನೆ ಮೇಲೆ ಯಾವುದೇ ಪರಿಣಾಮವಿಲ್ಲ. ಹಳೇ ಮೈಸೂರು ಭಾಗದಲ್ಲಿ ನಮ್ಮದೇ ಆದಂತಹ ಕಾರ್ಯಕರ್ತರ ಬಲವಿದೆ. ಸಂಘಟನೆ ಬಲವರ್ಧನೆಗೆ ಯೋಗೇಶ್ವರ್ ಒಬ್ಬರನ್ನೇ ಪಕ್ಷದ ಅವಲಂಬಿಸಿದ್ದಿಲ್ಲ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರಾಗಬೇಕೆಂದು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸುತ್ತಾರೆ. ಈ ಮಾತನ್ನು ಪಕ್ಷದ ರಾಷ್ಟ್ರೀಯ ನಾಯಕರು ಮೊದಲಿನಿಂದಲೂ ಹೇಳಿದ್ದು, ಅದೇ ಮಾತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದರು.

ಜೆಡಿಎಸ್ ನಾಯಕರು ಅಭ್ಯರ್ಥಿಯನ್ನು ಅಂತಿಮಗೊಳಿಸಿದ ನಂತರ ಉಭಯ ಪಕ್ಷಗಳ ನಾಯಕರು ಸಭೆ ಸೇರಿ ಚುನಾವಣಾ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಎನ್‌ಡಿಎ ಅಭ್ಯರ್ಥಿ ಗೆಲ್ಲುವುದಂತೂ ನಿಶ್ಚಿತವೆಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net