

ನರಗುಂದ: ರಾಜ್ಯ ಚುನಾವಣೆ ಆಯೋಗವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ದಿನಾಂಕ ನಿಗದಿಗೊಳಿಸಿದೆ. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಡಿ. 11ರಿಂದ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಹೀಗಾಗಿ, ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುವ ಜತೆಗೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಲಾಗಿದೆ.
ತಾಲೂಕಿನ ಹದ್ಲಿ, ಸುರಕೋಡ, ಭೈರನಹಟ್ಟಿ, ಚಿಕ್ಕನರಗುಂದ, ಬೆನಕನಕೊಪ್ಪ, ಹಿರೇಕೊಪ್ಪ, ಕಣಕೀಕೊಪ್ಪ, ಕೊಣ್ಣೂರ, ವಾಸನ, ಶಿರೋಳ, ರಡ್ಡೇರನಾಗನೂರ, ಬನಹಟ್ಟಿ, ಹುಣಸೀಕಟ್ಟಿ ಸೇರಿದಂತೆ ಒಟ್ಟು 13 ಗ್ರಾಪಂಗಳ 166 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 26,396 ಪುರುಷರು, 25,146 ಮಹಿಳೆಯರು ಸೇರಿ ಒಟ್ಟು, 51,542 ಮತದಾರರು ಗ್ರಾಪಂ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಆಯಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ನಾಮಪತ್ರ ಸ್ವೀಕಾರ, ಪರಿಶೀಲನೆ ಕಾರ್ಯ ನಡೆಯಲಿವೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ 1 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಆದ್ದರಿಂದ 13 ಗ್ರಾಪಂ ವ್ಯಾಪ್ತಿಯಲ್ಲಿ 27 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 57 ಮತಗಟ್ಟೆಗಳನ್ನು ವಿವಿಧ ಮೂಲಸೌಲಭ್ಯ ಒದಗಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
2015ರ ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿತ್ತು. ಈ ಐದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ, ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಿವೆ. ಗ್ರಾಮೀಣ ಭಾಗದ ಜನರು ಇವುಗಳ ಪರಿಣಾಮ ಕಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಈ ಬಾರಿ ಎಲ್ಲ ಗ್ರಾಪಂಗಳಲ್ಲಿ ತಮ್ಮ ಬೆಂಬಲಿಗ ಸದಸ್ಯರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ನ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರೂ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿರುವ ಅಭಿವೃದ್ಧಿ ಸಾಧನೆ ಮುಂದಿಟ್ಟುಕೊಂಡು ತಮ್ಮ ಬೆಂಬಲಿಗ ಸದಸ್ಯರನ್ನು ಗೆಲ್ಲಿಸಲು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಭಾರಿ ಪೈಪೋಟಿ ಏರ್ಪಡಲಿದೆ. ಸಂಘಟನೆಯ ಬಲವಿಲ್ಲದಿರುವ ಕಾರಣ ಜೆಡಿಎಸ್ ಇಲ್ಲಿ ಸಂಪೂರ್ಣ ಶೂನ್ಯವಾಗಿದೆ.
ಈ ಬಾರಿ ಗ್ರಾಪಂ ಚುನಾವಣೆಗಳು ಅತ್ಯಂತ ಶಾಂತಿಯುತ, ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ನಡೆಸಲು ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಈಗಾಗಲೇ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಹೊಸ ವರ್ಷಕ್ಕೆ ಎಲ್ಲ ಗ್ರಾಮ ಪಂಚಾಯಿತಿಗಳು ಹೊಸದಾಗಿ ರೂಪುಗೊಳ್ಳಲಿವೆ.
ಎಲ್ಲ ಗ್ರಾಪಂ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ ಈಗಾಗಲೇ ಸಾಕಷ್ಟು ಸಭೆ ನಡೆಸಿದ್ದೇವೆ. ಪ್ರತಿ ಬೂತ್ಗೆ ಒಂದರಂತೆ ಯುವ ಮೋರ್ಚಾದಿಂದ ಗ್ರಾಮ ಘಟಕ, 1 ಪಂಚರತ್ನ, ಜಿಪಂ ಕ್ಷೇತ್ರಕ್ಕೆ ಒಬ್ಬರಂತೆ ಇಬ್ಬರು ಉಸ್ತುವಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ವರ್ಷ 12 ಗ್ರಾಪಂಗಳಲ್ಲಿ 8 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದರು. ಈ ಬಾರಿ ಎಲ್ಲ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ.| ಗುರಣ್ಣ ಆದೆಪ್ಪನವರ ಬಿಜೆಪಿ ನರಗುಂದ ಮಂಡಳದ ಅಧ್ಯಕ್ಷ
ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರು ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ನಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಯಾವುದೇ ಅಸಮಾಧಾನ ಉಂಟಾಗದಂತೆ ಪಕ್ಷದ ಬೆಂಬಲಿತ ಸದಸ್ಯರು ಜಯ ಗಳಿಸಬೇಕು.| ಪ್ರವೀಣ ಯಾವಗಲ್, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ