ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿ ಜಪ್ತಿ

M I office siezed
Published on

ಬೆಂಗಳೂರು: ದಶಕವೇ ಕಳೆದರೂ ಕಲಬುರಗಿ ಜಿಲ್ಲೆಯ 81 ರೈತರಿಗೆ ಭೂ ಪರಿಹಾರ ಪಾವತಿಯಾಗದ ಕಾರಣ ಕೋರ್ಟ್ ಆದೇಶದಂತೆ ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿ ಶುಕ್ರವಾರ ಜಪ್ತಿಯಾಯಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೋತನಹಿಪ್ಪರಗಿ, ಜಮಗಾ, ಹೊದಲೂರು, ನಂದಗೂರು ಗ್ರಾಮಗಳ 81 ರೈತರ 141 ಎಕರೆ ಜಮೀನನ್ನು ಸಣ್ಣ ನೀರಾವರಿ ಇಲಾಖೆ ಯೋಜನೆಗೆ 2013ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಭೂಪರಿಹಾರ ನಿಗದಿಯಾದರೂ ಸಕಾಲಕ್ಕೆ ಪಾವತಿ ಮಾಡದ ಕಾರಣ ಸಂತ್ರಸ್ತ ರೈತರು ಕೋರ್ಟ್‌ಗೆ ಮೊರೆ ಹೋಗಿದ್ದರು. ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿ ಜಪ್ತಿಯಾಗಿದೆ.

ರೈತ ಸಿದ್ಧಪ್ಪ ಪೂಜಾರಿ ಸಮಕ್ಷಮವೇ ಕಾರ್ಯದರ್ಶಿ ಕಾರು, ಕಚೇರಿಯ 13 ಕುರ್ಚಿಗಳು, ತಲಾ ನಾಲ್ಕು ಕಂಪ್ಯೂಟರ್, ಜೆರಾಕ್ಸ್ ಮಷಿನ್, ಪ್ರಿಂಟರ್, ಟಿವಿಯನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿ ಕೊಂಡೊಯ್ಯುವಾಗ ಇಲಾಖೆ ಕಾರ್ಯದರ್ಶಿ ರಾಘವನ್ ಕಚೇರಿಯಲ್ಲಿದ್ದರು ಎನ್ನಲಾಗಿದೆ.

ವಿವಿಧ ಕೋರ್ಟ್‌ಗಳು ಆದೇಶಿಸಿದರೂ ಭೂಮಿ ಕಳೆದುಕೊಂಡ 81 ರೈತರಿಗೆ 40 ಕೋಟಿ ರೂ. ಪರಿಹಾರ ಪಾವತಿಸಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿ ಜಪ್ತಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲ ಸಂಜೀವ್‌ಕುಮಾರ್ ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net