ವೆನ್‌ಲಾಕ್‌ಗೆ ರೋಗಿಗಳನ್ನು ಕಳುಹಿಸುವ ಮುನ್ನ ಐಸಿಯು ಬೆಡ್ ಖಾತರಿ ಅಗತ್ಯ

ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸು ಮಾಡಿ ಕಳುಹಿಸುವ ಮೊದಲು, ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಲಭ್ಯತೆಯನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕು ಎಂದು  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಪ್ರಕಾಶ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸು ಮಾಡಿ ಕಳುಹಿಸುವ ಮೊದಲು, ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಲಭ್ಯತೆಯನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಪ್ರಕಾಶ್ ಮನವಿ ಮಾಡಿದ್ದಾರೆ.
Published on
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸು ಮಾಡಿ ಕಳುಹಿಸುವ ಮೊದಲು, ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಲಭ್ಯತೆಯನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕು ಎಂದು ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಪ್ರಕಾಶ್ ಮನವಿ ಮಾಡಿದ್ದಾರೆ. ’
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುನ್ಸೂಚನೆ ಇಲ್ಲದೆ ಕೊನೆ ಕ್ಷಣದಲ್ಲಿ ರೋಗಿಗಳನ್ನು ಕಳುಹಿಸುವುದರಿಂದ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ವೆನ್‌ಲಾಕ್ ಆಸ್ಪತ್ರೆಗೆ ಕೇರಳ ಸೇರಿದಂತೆ ಸುಮಾರು 31 ಜಿಲ್ಲೆಗಳಿಂದ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಯಡಿ ರೋಗಿಗಳು ಬರುತ್ತಾರೆ. ಆಸ್ಪತ್ರೆಯಲ್ಲಿ 116 ಐಸಿಯು ಬೆಡ್‌ಗಳಿದ್ದರೂ (21 ಮೆಡಿಕಲ್ ಐಸಿಯು, 27 ಸರ್ಜಿಕಲ್ ಐಸಿಯು ಸೇರಿದಂತೆ), ಹೊರ ಜಿಲ್ಲೆಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಬೆಡ್‌ಗಳ ತೀವ್ರ ಕೊರತೆ ಎದುರಾಗುತ್ತಿದೆ. ಬೆನ್ನುಹುರಿ ಮುರಿತ, ಮೆದುಳು ಸ್ರಾವದಂತಹ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿರುವ ರೋಗಿಗಳನ್ನು ಕೊನೆ ಕ್ಷಣದಲ್ಲಿ ಇಲ್ಲಿಗೆ ಕಳುಹಿಸಿದಾಗ ಬೆಡ್‌ಗಳು ಸಿಗದಿದ್ದರೆ, ರೋಗಿಗಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಬೆಡ್ ಲಭ್ಯವಿಲ್ಲದಿದ್ದಾಗ ಸಿಬ್ಬಂದಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲು ಸಮಯ ತಗಲುತ್ತದೆ. ಆದರೆ ಇದಕ್ಕಾಗಿ ವೆನ್‌ಲಾಕ್ ಆಸ್ಪತ್ರೆಯನ್ನು ದೂಷಿಸುವುದು ಸರಿಯಲ್ಲ ಎಂದರು.
*ಹೆಚ್ಚುವರಿ ಬೆಡ್ ಹಾಗೂ ಸಿಬ್ಬಂದಿ ಬೇಡಿಕೆ
ಆಸ್ಪತ್ರೆಯಲ್ಲಿ ಸದ್ಯ ಹೆಲ್ಪ್ ಡೆಸ್ಕ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ವ್ಯವಸ್ಥೆ ಇದ್ದು, ಶೀಘ್ರದಲ್ಲೇ ವೆಬ್‌ಸೈಟ್ ಮೂಲಕ ಬೆಡ್ ಲಭ್ಯತೆ ತಿಳಿಸುವ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಹೆಚ್ಚುವರಿ 50 ವೆಂಟಿಲೇಟರ್ ಬೆಡ್‌ಗಳಿಗೆ ಬೇಡಿಕೆ ಇಡಲಾಗಿದೆ. ಕೇವಲ ಬೆಡ್‌ಗಳಿದ್ದರೆ ಸಾಲದು, ಐಸಿಯು ನಿಯಮಾವಳಿ ಪ್ರಕಾರ ನುರಿತ ನರ್ಸ್‌ಗಳ ಅಗತ್ಯವೂ ಇರುವುದರಿಂದ ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಅಧೀಕ್ಷಕರು ಮಾಹಿತಿ ನೀಡಿದರು.
*ರಾಜ್ಯ ಮಟ್ಟದ ಮಾರ್ಗಸೂಚಿಗೆ ಪತ್ರ
ಒಂದು ಜಿಲ್ಲಾಸ್ಪತ್ರೆಯಿಂದ ಇನ್ನೊಂದು ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ವರ್ಗಾಯಿಸುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು 10 ಅಂಶಗಳ ಸಮಗ್ರ ಮಾರ್ಗಸೂಚಿಯನ್ನು ಜಾರಿಗೊಳಿಸುವಂತೆ ಕೋರಿ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇದರಲ್ಲಿ ನಿರ್ದಿಷ್ಟ ಕಾರಣಗಳು, ಅಗತ್ಯತೆ ಮತ್ತು ಬೆಡ್‌ಗಳ ಲಭ್ಯತೆಯ ಪರಿಶೀಲನೆಯನ್ನು ಕಡ್ಡಾಯಗೊಳಿಸಲು ಕೋರಲಾಗಿದೆ. ಸ್ವಂತ ವೈದ್ಯಕೀಯ ಕಾಲೇಜು ಹೊಂದಿರುವ ಜಿಲ್ಲೆಗಳಿಂದಲೂ ರೋಗಿಗಳನ್ನು ಇಲ್ಲಿಗೆ ಕಳುಹಿಸುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ರೋಗಿಗಳಿಗೂ ಬೆಡ್ ಸಿಗದೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net