ಸಂಪದಾಕೀಯ: ಆತ್ಮವಿಶ್ವಾಸದ ಪರೀಕ್ಷೆ

ವಿಜಯವಾಣಿ (2)
Published on

ಇದೇ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯದಲ್ಲಿ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಇಂದು, ಶುಕ್ರವಾರ ಪ್ರಕಟವಾಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಫಲಿತಾಂಶ ಪ್ರಕಟಿಸಲಿದ್ದು, 12.30ಕ್ಕೆ ಮಂಡಳಿಯ ಜಾಲತಾಣದಲ್ಲಿ ಮಾಹಿತಿ ಸಿಗಲಿದೆ.

ಈ ಬಾರಿ ಒಟ್ಟು 8.93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೈಕ್ಷಣಿಕ ಜೀವನದಲ್ಲಿ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಮುಂತಾದ ಹಂತಗಳು ಹೆಚ್ಚು ಮಹತ್ವ ಹೊಂದಿರುತ್ತವೆ. ಮುಂದಿನ ಕೋರ್ಸ್​ಗಳಿಗೆ ತೆರಳಲು ನಿರ್ಣಾಯಕ ಎನಿಸುತ್ತವೆಯಾದ್ದರಿಂದ ಇವಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಂಕಗಳಿಕೆಯ ಆಧಾರದ ಮೇಲೆ ವಿದ್ಯಾರ್ಥಿಗಳ ಕ್ಷಮತೆ ಅಳೆಯುವ ವ್ಯವಸ್ಥೆ ಇರುವುದರಿಂದಾಗಿ, ಹೆಚ್ಚು ಅಂಕ ಪಡೆಯುವತ್ತ ಗಮನ ಸಹಜ.

ಅಂಕವೇ ಅಂತಿಮವಲ್ಲ ಎಂಬುದು ಗೊತ್ತಿದ್ದರೂ, ಈ ಪದ್ಧತಿಯ ಬದಲಿಗೆ ಬೇರೆ ಪರ್ಯಾಯವಿಲ್ಲದೆ ಮುಂದುವರಿದುಕೊಂಡು ಬರುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾತ್ರವಲ್ಲದೆ, ಪಾಲಕರು ಹಾಗೂ ಶಿಕ್ಷಕರ ಮೇಲೂ ಅಗಾಧ ಒತ್ತಡ ಉಂಟಾಗುತ್ತಿದೆ. ನೂರಕ್ಕೆ ನೂರು ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಈಗ ದೊಡ್ಡ ವಿಷಯವಾಗಿ ಉಳಿದಿಲ್ಲ. ಹೆಚ್ಚು ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕು ಎಂದು ವ್ಯವಸ್ಥೆ ನಿರೀಕ್ಷಿಸುತ್ತದೆ.

ಹೀಗಾಗಿ, ಫಲಿತಾಂಶದ ದಿನದಂದು ವಿದ್ಯಾರ್ಥಿಗಳು, ಪಾಲಕರಾದಿಯಾಗಿ, ಶಿಕ್ಷಕರು ಸಹ ಕುತೂಹಲದ ಜೊತೆಗೆ ಸ್ವಲ್ಪ ಆತಂಕವನ್ನೂ ಅನುಭವಿಸುವಂತಾಗಿದೆ. ಅನುತ್ತೀರ್ಣವಾದೆವೆಂದು ಜೀವಕಳೆದುಕೊಳ್ಳುವಂತಹ ಕೃತ್ಯಕ್ಕೂ ಮುಂದಾಗುವವರಿರುವುದು ಖೇದಕರ. ಈಚೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನದಂದೇ, ಅನುತ್ತೀರ್ಣ ಹಾಗೂ ಕಡಿಮೆ ಅಂಕದ ಕಾರಣಕ್ಕೆ ಐವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರತಿ ಸಲ ಫಲಿತಾಂಶ ಬಂದಾಗಲೂ ಈ ರೀತಿಯ ಘಟನೆಗಳು ವರದಿಯಾಗುತ್ತವೆ.

ಭವ್ಯ ಬದುಕನ್ನು ಬಾಳಬೇಕಾದ ಯುವಜನರು ಹೀಗೆ ಅಕಾಲದಲ್ಲಿ ಸಣ್ಣ ಕಾರಣಕ್ಕೆ ಜೀವವನ್ನೇ ತೆಗೆದುಕೊಳ್ಳುವಂಥ ಕೆಲಸಕ್ಕೆ ಮುಂದಾಗುವುದು ಆಯಾ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜದ ಅಂತಃಸಾಕ್ಷಿಯನ್ನು ಕಲಕುವ ವಿಚಾರ. ಹಾಗಾದರೆ, ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣವಾದಾಕ್ಷಣ ಬದುಕೇ ಮುಗಿದಂತಲ್ಲ, ಜೀವನದ ಅವಕಾಶಗಳು ಹಲವು ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಸೋತಿದೆಯೇ? ಶಾಲೆಯ ಮೆಟ್ಟಿಲನ್ನೇ ಏರದವರು ಅಥವಾ ಕಡಿಮೆ ಶಿಕ್ಷಣ ಪಡೆದವರು ಸಹ ಜೀವನದಲ್ಲಿ ದೊಡ್ಡ ಸಾಧನೆಗೈದಿದ್ದನ್ನು ಬಿಂಬಿಸುವಲ್ಲಿ ವ್ಯವಸ್ಥೆ ಯಶಸ್ವಿಯಾಗಿಲ್ಲವೆ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ಹಾಗಂತ, ಶಿಕ್ಷಣವನ್ನು ಬಹಳ ಹಗುರಾಗಿ ಪರಿಗಣಿಸಿ, ಮನಸ್ಸಿಗೆ ಬಂದ ಹಾಗೆ ವರ್ತಿಸಲು ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕು ಅಂತಲ್ಲ. ಯಾವುದೇ ವ್ಯವಸ್ಥೆಗೆ ಒಂದು ಚೌಕಟ್ಟು ಇರಲೇಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಸ್ವೇಚ್ಛೆಗೆ ದಾರಿಮಾಡುತ್ತದೆ. ಅದೇ ವೇಳೆಗೆ, ಜೀವನ ದೊಡ್ಡದು ಎಂಬ ಪರಿಕಲ್ಪನೆಯನ್ನು ಮಕ್ಕಳ ಮನದಲ್ಲಿ ತುಂಬುವುದೂ ಅಗತ್ಯ. ಒಂದು ಪರೀಕ್ಷೆಯಲ್ಲಿ ಫೇಲಾದರೆ, ಬಾಗಿಲೇ ಮುಚ್ಚಿದಂತಲ್ಲ; ಬೇರೆ ಆಯ್ಕೆಗಳು ಇರುತ್ತವೆ ಎಂಬ ಅಂಶವನ್ನು ಮಕ್ಕಳಲ್ಲಿ ಗಟ್ಟಿಮಾಡುವುದು ಸರ್ಕಾರ ಹಾಗೂ ಸಮಾಜದ ಹೊಣೆಗಾರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net