

ಸಾಗರ: ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಕೆ.ಕೆ.ಮಂಜುನಾಥ್ ಕುಮಾರ್ ಅವರನ್ನು ನೈಋತ್ಯ ಕ್ಷೇತ್ರದಲ್ಲಿ ಗೆಲ್ಲಿಸಲು ಕಾಂಗ್ರೆಸ್ ಸಂಘಟಿತವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಕಾಲೇಜು, ಕಚೇರಿ, ಶಿಕ್ಷಕರು ಹಾಗೂ ಪದವೀಧರ ಮತದಾರರು ಇರುವ ಕೇಂದ್ರಗಳಲ್ಲಿ ಪ್ರಚಾರ ನಡೆಸಲಾಗುವುದು. ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರ್ಹ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಕಾರ್ಮಿಕರ ಪರವಾಗಿ ಕೆಲಸ ಮಾಡಿರುವ ಆಯನೂರು ಮಂಜುನಾಥ್, ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಹೊಂದಿರುವ ಕೆ.ಕೆ.ಮಂಜುನಾಥ್ ಗೆಲ್ಲಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮತ್ತಷ್ಟು ಸಹಕಾರಿ ಆಗಲಿದೆ. ಎನ್‌ಪಿಎಸ್ ರದ್ಧತಿಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ಸರ್ಕಾರ ನಿಮ್ಮ ಪರವಾಗಿರಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶೆಗೆ ಒಳಗಾಗಿದ್ದು, ಸಿಎಂ ಹಾಗೂ ಡಿಸಿಎಂ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಿಷ್ಪಕ್ಷಪಾತವಾಗಿ ನಡೆಸುತ್ತಿದೆ. ಪ್ರಕರಣ ಸಿಬಿಐಗೆ ಒಪ್ಪಿಸಿ ಎನ್ನುತ್ತಿರುವುದು ಹಾಸ್ಯಾಸ್ಪದ. ಲೋಕಸಭಾ ಚುನಾವಣೆ ದೀರ್ಘಕಾಲ ನಡೆಯುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಮುಂದಿನ ಚುನಾವಣೆಯನ್ನು ನಾಲ್ಕು ಹಂತದಲ್ಲಿ ನಡೆಸಬೇಕು ಎಂದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ಬಿ.ಆರ್.ಜಯಂತ್, ಸುರೇಶಬಾಬು, ಮಹಾಬಲ ಕೌತಿ, ಚೇತನರಾಜ್ ಕಣ್ಣೂರು, ಸೋಮಶೇಖರ, ಅಶೋಕ, ಎಚ್.ಎಂ.ರವಿಕುಮಾರ್, ಗಣಪತಿ, ಪ್ರಭಾವತಿ ಚಂದ್ರಕಾಂತ್, ಕೆ.ಹೊಳೆಯಪ್ಪ ಇದ್ದರು.