ಬಿಜೆಪಿ 18 ಶಾಸಕರ ಅಮಾನತು ತೆರವು ವಿಶ್ವಾಸ: ಆರ್.ಅಶೋಕ್ | Harsh action is not right

R Ashok
Published on

ಬೆಂಗಳೂರು: ವಿಧಾನಸಭೆಯಿಂದ 18 ಶಾಸಕರ ಅಮಾನತು, ನಿರ್ಬಂಧ ತೆರವು ಮನವಿಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಸ್ಪೆಂಡ್ ತೆರವುಗೊಳಿಸಲಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಪಕ್ಷದ ಶಾಸಕರ ನಿಯೋಗದೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಸಚಿವ ಕೆ.ಎನ್.ರಾಜಣ್ಣ ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸುವ ಪ್ರಯತ್ನದ ಉನ್ನತಮಟ್ಟದ ತನಿಖೆಗೆ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಒತ್ತಾಯಿಸಿದೆವು. ಸರ್ಕಾರದಿಂದ ತೃಪ್ತಿಕರ ಉತ್ತರ ಬಾರದ ಕಾರಣ ಪ್ರತಿಭಟನೆ ನಡೆದಿದೆಯೇ ಹೊರತು ಸ್ಪೀಕರ್‌ಗೆ ಅಗೌರವಿಸಿಲ್ಲವೆಂದು ಮನವರಿಕೆ ಮಾಡಿಕೊಟ್ಟಿದ್ದೇವೆ.

ನಿಯೋಗದ ಮನವಿಯನ್ನು ಸ್ಪೀಕರ್ ಆಲಿಸಿ, ವಿಧಾನಸಭೆ ಕಾರ್ಯದರ್ಶಿ ಜತೆಗೆ ಮಾಹಿತಿ ಪಡೆದು, ಸರ್ಕಾರದ ಜತೆಗೆ ಚರ್ಚಿಸಿ ಆದೇಶ ಪರಿಶೀಲಿಸುವ ಭರವಸೆ ನೀಡಿದರು.

ಇದೇ ಮೊದಲ ಘಟನೆಯಲ್ಲ

ಅಮಾನತು ಜತೆಗೆ ನಿರ್ಬಂಧ ವಿಧಿಸಿರುವ ಕಾರಣ ವಿಧಾಮಂಡಲದ ಸಮಿತಿ ಸಭೆಗಳಿಗೆ ಶಾಸಕರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಧಾನಸಭೆಯಲ್ಲಿ ಈ ರೀತಿಯ ಪ್ರತಿಭಟನೆಗಳು ಇದೇ ಮೊದಲ ಬಾರಿಗೆ ಆಗಿದ್ದೇನಲ್ಲ.

ಇಂತಹ ಘಟನೆಗಳು ನಡೆದಾಗ ಇದ್ದ ಸ್ಪೀಕರ್‌ಗಳು ಆರು ತಿಂಗಳು ಸಸ್ಪೆಂಡ್ ಹಾಗೂ ಕಠಿಣ ನಿರ್ಬಂಧ ವಿಧಿಸಿದ ನಿದರ್ಶನಗಳಿಲ್ಲ. ಇಂತಹ ಕ್ರಮ ಸರಿಯಲ್ಲ ಎಂಬುದನ್ನು ಸ್ಪೀಕರ್ ಖಾದರ್ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.

ಸ್ಪೀಕರ್ ತೀರ್ಮಾನದ ಮೇಲೆ ಮುಂದಿನ ನಡೆ

ಮಾಜಿ ಸಚಿವ ಬೈರತಿ ಬಸವರಾಜ ಪ್ರತಿಕ್ರಿಯಿಸಿ, ಸ್ಪೀಕರ್‌ಗೆ ಎಲ್ಲ ಹೇಳಿದ್ದೇವೆ. ವಿಧಾನಸಭೆ ಒಳಗೆ ನಡೆದ ಘಟನೆಯಾದ್ದರಿಂದ ಸರ್ಕಾರದ ಜತೆಗೆ ಚರ್ಚಿಸಿ ಮರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಪಕ್ಷದ 18 ಶಾಸಕರ ಅಮಾನತು ಆದೇಶ ತೆರವುಗೊಳಿಸುವ ವಿಶ್ವಾಸವಿದೆ. ಸ್ಪೀಕರ್ ನಿರ್ಧಾರವನ್ನು ನೋಡಿಕೊಂಡು ಪಕ್ಷದ ನಾಯಕರು ಮುಂದಿನ ನಡೆ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ ಆರು ತಿಂಗಳು ಕಾಲ ಅಮಾನತು ಮಾಡಿರುವುದು ಕಾನೂನು ಪ್ರಕಾರ ಊರ್ಜಿತವಾಗದು. ಟಿಎ, ಡಿಎ ಕೊಡಬೇಡಿ, ಸಮಿತಿ ಸಭೆಗೆ ಹೋಗಬೇಡಿ ಎಂದಿದ್ದೂ ತಪ್ಪು. ನಾವು ಕೋರ್ಟ್‌ಗೆ ಹೋಗುವ ಮುನ್ನ ಇಲ್ಲೇ ಸರಿಪಡಿಸಿ ಎಂದೂ ಸ್ಪೀಕರ್‌ಗೆ ವಿನಂತಿಸಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net