ಭೂಮಿಗೆ ಸುರಕ್ಷಿತವಾಗಿ ಮರಳುವ ವಿಶ್ವಾಸ: ಅಂತರಿಕ್ಷದಿಂದ ಸುನಿತಾ ವಿಲಿಯಮ್ಸ್​, ವಿಲ್​ವೋರ್ ಮಾತು

sunitha
Published on

ವಾಷಿಂಗ್ಟನ್: ಬೋಯಿಂಗ್​ನ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಮತ್ತು ಇಂಜಿನ್ ಸಮಸ್ಯೆ ಇದ್ದರೂ ತಾವು ಶೀಘ್ರವೇ ಸುರಕ್ಷಿತವಾಗಿ ಭೂಮಿಗೆ ಮರಳುವುದಾಗಿ ಭಾರತೀಯ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಮತ್ತು ಅವರ ಜತೆ ಗಗನಯಾತ್ರೆ ಕೈಗೊಂಡಿರುವ ಬ್ಯಾರಿ ಬುಚ್ ವಿಲ್​ವೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಂತರಿಕ್ಷ ನಿಲ್ದಾಣದಿಂದ ಭೂಮಿಯಲ್ಲಿರುವ ತಮ್ಮ ಸಹೋದ್ಯೋಗಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ರಾತ್ರಿ 8.30ರಿಂದ ಸುಮಾರು 15 ನಿಮಿಷಗಳ ಕಾಲ ಇಬ್ಬರೂ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಇದರ ನೇರಪ್ರಸಾರ ಮಾಡಿತು.

ಬೋಯಿಂಗ್ ಸ್ಟಾರ್​ಲೈನರ್​ನಲ್ಲಿ ಜೂ. 5ರಂದು ಇವರಿಬ್ಬರೂ ಅಂತರಿಕ್ಷಯಾತ್ರೆ ಕೈಗೊಂಡಿದ್ದಾರೆ. ಜೂನ್ 22ರಂದು ಭೂಮಿಗೆ ಮರಳಬೇಕಿತ್ತು. ಗಗನನೌಕೆಯಲ್ಲಿ ಹೀಲಿಯಂ ಸೋರಿಕೆಯಂತಹ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಎರಡು ಬಾರಿ ಅವರ ಮರಳುವಿಕೆಯನ್ನು ಮುಂದೂಡಲಾಗಿದೆ.

ಇದರಿಂದಾಗಿ ಅವರು ಭೂಮಿಗೆ ಮರಳುವುದು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆಯೇ ಶಂಕೆ ಮೂಡಿದೆ. ಈ ಸಂಶಯ ನಿವಾರಣೆ ಹಿನ್ನೆಲೆಯಲ್ಲಿ ನಾಸಾ ಈ ಮಾತುಕತೆಯನ್ನು ಆಯೋಜಿಸಿತ್ತು. ತಮ್ಮ ಯಾತ್ರೆಯ ಅನುಭವ, ಈಗ ಉದ್ಭವವಾಗಿರುವ ತಾಂತ್ರಿಕ ಸಮಸ್ಯೆಗಳು, ಅವುಗಳನ್ನು ಬಗೆಹರಿಸಲು ನಡೆಯುತ್ತಿರುವ ಪ್ರಯತ್ನ ಮುಂತಾದವುಗಳ ಬಗ್ಗೆ ಅವರಿಬ್ಬರೂ ಬೆಳಕು ಚೆಲ್ಲಿದರು. ಮೊದಲು ಮಾತನಾಡಿದ ವಿಲ್​ವೋರ್, ‘ನಮ್ಮ ಯಾತ್ರೆ ಅದ್ಭುತವಾಗಿತ್ತು. ಗಗನನೌಕೆ ಚೆನ್ನಾಗಿ ಕೆಲಸ ಮಾಡಿತು.

ಈಗ ಉಂಟಾಗಿರುವ ಸಮಸ್ಯೆಯನ್ನು ನಮ್ಮ ತಂಡ ಪರಿಹರಿಸುವಲ್ಲಿ ಯಶಸ್ವಿಯಾಗುತ್ತದೆ. ನಾವು ಭೂಮಿಗೆ ಮರಳುತ್ತೇವೆ ಎಂಬ ವಿಶ್ವಾಸ ಇದೆ. ಮುಂದಿನ ಬಾರಿ ಅಗತ್ಯ ಬದಲಾವಣೆಗಳನ್ನು ತಂಡ ಮಾಡಲಿದೆ. ಮುಂದೆ ಜೀನ್ ಸೀಕ್ವೆನ್ಸಿಂಗ್ ಮತ್ತು 3-ಡಿ ಪ್ರಿಂಟೆಡ್ ಮೂನ್ ಮೈಕ್ರೋಸ್ಕೋಪ್ ಬಳಸಿ ವೈಜ್ಞಾನಿಕ ಪ್ರಯೋಗಗಳಲ್ಲಿಯೂ ಭಾಗವಹಿಸುವುದಿದೆ’ ಎಂದು ಹೇಳಿದರು. ಗಗನನೌಕೆ 45 ದಿನಗಳ ಕಾಲ ಐಎಸ್​ಎಸ್​ನಲ್ಲಿರುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಅದು ಅಲ್ಲಿ 35 ದಿನ ಕಳೆದಿದೆ. ಸುರಕ್ಷಿತ ಮರಳುವಿಕೆಗೆ ಇನ್ನೂ 10 ದಿನ ಮಾತ್ರ ಬಾಕಿ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net