

ನಿಮ್ಮ ಪಾಲಿಗೆ ನಿಜವಾದ ಯಶಸ್ಸು ಎಂದರೇನು? ಅದು ಪ್ರಸಿದ್ಧಿ ಪಡೆಯುವುದೆ? ಅಥವಾ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತ ಹೊಂದುವುದೆ? ಯೋಚಿಸಿ. ನಾವು ಆಗಾಗ ಭೇಟಿಯಾಗುವ ಅನೇಕ ಪ್ರಸಿದ್ಧ ಮತ್ತು ಶ್ರೀಮಂತ ವ್ಯಕ್ತಿಗಳು ಕೂಡಾ ಸಂತೋಷವಾಗಿರುವುದಿಲ್ಲ. ಅನೇಕ ಯಶಸ್ವೀ ವ್ಯಕ್ತಿಗಳೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವೂ ನೋಡಿರುತ್ತೀರಿ. ಇದರಿಂದ ಕೀರ್ತಿ ಮತ್ತು ಸಂಪತ್ತು ಮಾತ್ರವೇ ಸಂತೋಷ ಮತ್ತು ಯಶಸ್ಸಿಗೆ ಕಾರಣವಲ್ಲ ಎಂಬುದು ತಿಳಿಯುತ್ತದೆ.
ಯಶಸ್ಸು ಎಂದರೆ ಅದು ಒಂದು ದಿನದಲ್ಲಿ ತಲುಪುವ ಗುರಿಯಲ್ಲ. ಅದು ನೀವು ಜೀವನದಲ್ಲಿ ಅನುಕ್ಷಣವೂ ಹೊಂದಿರುವ ಸಂಪತ್ತು. ನೀವು ಸಂತೋಷದಿಂದ ಕಳೆಯುವ ಪ್ರತಿಯೊಂದು ದಿನವೂ ಯಶಸ್ವೀ ದಿನವೆಂದು ತಿಳಿಯಿರಿ. ನೀವು ಯಾವ ವಿಷಯಕ್ಕೂ ಭಯಪಡದೆ ಬದುಕುವ ದಿನಗಳೆಲ್ಲ ಯಶಸ್ವೀ ದಿನಗಳು. ಅತ್ಯಂತ ಕ್ಲೇಶಮಯ ಕಾಲದಲ್ಲೂ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದೇ ನಿಜವಾದ ಯಶಸ್ಸು.
ನೀವು ಶ್ರೀಮಂತರಾಗಬಾರದು ಅಥವಾ ಪ್ರಸಿದ್ಧರಾಗಬಾರದು ಎಂದು ನಾವು ಹೇಳುತ್ತಿಲ್ಲ. ಸಮಾಜಕ್ಕೆ ಉಪಯುಕ್ತವಾದ ಕೆಲಸ ಮಾಡಿದರೆ ನಿಮ್ಮನ್ನು ಎಲ್ಲರೂ ಗುರುತಿಸುತ್ತಾರೆ. ಶ್ರೀಮಂತರಾಗಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ಯಶಸ್ಸು ಎನ್ನುವುದು ನಿಮ್ಮ ಸಾಮರ್ಥ್ಯದಲ್ಲಿ ನಿಮಗಿರುವ ವಿಶ್ವಾಸ. ಈ ವಿಶ್ವಾಸವಿದ್ದರೆ ನೀವು ಯಾವಾಗ ಬೇಕಾದರೂ ಹಣ ಗಳಿಸಬಹುದು.
‘ಕ್ರಿಯಾ ಸಿದ್ಧಿಃ ಭವತಿ ಸತ್ವೇ, ಮಹತಾಂ ನೋಪಕರಣೇ’ ಎಂಬ ಮಾತು ಸಂಸ್ಕೃತದಲ್ಲಿದೆ. ನಿಮ್ಮ ಕೆಲಸಗಳ ಫಲವಾಗಿ ದೊರೆಯುವ ಯಶಸ್ಸು ನಿಮ್ಮ ಕೌಶಲ, ಸೃಜನಶೀಲತೆ, ಸಾಧನಗಳು ಮತ್ತು ನೀವು ಹೊಂದಿರುವ ಸಂಪನ್ಮೂಲಗಳ ಮೇಲೆ ಮಾತ್ರ ಅವಲಂಬಿಸಿರದೆ ನಿಮ್ಮಲ್ಲಿರುವ ‘ಸತ್ವ’ವನ್ನೂ ಅವಲಂಬಿಸಿರುತ್ತದೆ. ಮನಸ್ಸು ಸತ್ವಗುಣದಿಂದ ತುಂಬಿದ್ದಾಗ ಅದು ಜಾಗೃತವಾಗಿರುತ್ತದೆ, ನಿಶಿತವಾಗಿರುತ್ತದೆ, ಸಂತೋಷ, ಉತ್ಸಾಹಗಳಿಂದ ಕೂಡಿರುತ್ತದೆ.
ಈ ಸತ್ವಗುಣವನ್ನು ನಿಮ್ಮಲ್ಲಿ ಹೇಗೆ ಹೆಚ್ಚಿಸಿಕೊಳ್ಳುತ್ತೀರಿ? ಉತ್ತರ ತುಂಬಾ ಸರಳ. ನಿಮ್ಮ ಆಹಾರದ ಕಡೆ ಗಮನ ಕೊಡಿ, ಬೇಕಾದಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳುವ ಅಭ್ಯಾಸವಿಟ್ಟುಕೊಳ್ಳಿ. ಪ್ರತಿದಿನ ನಿಷ್ಠೆಯಿಂದ ಧ್ಯಾನ ಮತ್ತು ಸಾಧನೆ ಮಾಡುವ ಅಭ್ಯಾಸವಿರಲಿ. ನಿಮ್ಮಲ್ಲಿ ಅಚಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಿ. ಈ ಎಲ್ಲ ಅಭ್ಯಾಸಗಳನ್ನು ರೂಢಿಸಿಕೊಂಡರೆ, ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತವೆ. ನಿಮ್ಮ ಶಕ್ತಿ ಧನಾತ್ಮಕವಾಗುತ್ತದೆ ಹಾಗೂ ಹೆಚ್ಚಿನ ಅದೃಷ್ಟವನ್ನು ಸೆಳೆಯುತ್ತದೆ. ಮೌನವಾಗಿ ಕುಳಿತುಕೊಳ್ಳುವುದು ಮತ್ತು ನಿಯಮಿತವಾಗಿ ಧ್ಯಾನ ಮಾಡುವುದು ಮುಂತಾದ ಅಭ್ಯಾಸಗಳಲ್ಲಿ ತೊಡಗಿಕೊಂಡ ಮೇಲೆ ಲಾಭವು ಎರಡು ಅಥವಾ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅನೇಕ ಉದ್ಯಮಿಗಳು ಹೇಳುತ್ತಾರೆ.
ನಿಮ್ಮಲ್ಲಿ ಸತ್ವ ಅಧಿಕವಾಗಿರುವಾಗ ಅನಾಯಾಸವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದು ಯಶಸ್ಸಿನ ಹಿಂದೆ ಇರುವ ದೊಡ್ಡ ರಹಸ್ಯ. ಆಗ ನೀವು ಫಲಿತಾಂಶದ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಯುಕ್ತಕಾಲ ಎಂಬುದು ಒಂದು ಪ್ರಮುಖ ಅಂಶ. ಸರಿಯಾದ ಫಲಿತಾಂಶವು ಸರಿಯಾದ ಕಾಲಕ್ಕೆ ಬರುತ್ತದೆ. ನೀವು ಇಂದು ಒಂದು ಮಾವಿನ ಬೀಜವನ್ನು ನೆಟ್ಟು ರಾತ್ರಿ ಬೆಳಗಾಗುವುದರೊಳಗೆ ಅದು ಹಣ್ಣು ಬಿಡಬೇಕೆಂದರೆ ಹೇಗೆ? ನೆಲವನ್ನು ಬಗೆದು ಬೀಜ ಮೊಳಕೆಯೊಡೆದಿದೆಯಾ ಎಂದು ನೋಡುತ್ತಿದ್ದರೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಅದಕ್ಕೆ ಅದರದೇ ಆದ ಸಮಯ ಬೇಕು. ಹೀಗಾಗಿ, ನಿಮಗೆ ಬೇಕಾದ ಫಲಿತಾಂಶ ದೊರೆಯಲು ಸತ್ವ ಮತ್ತು ಕಾಲ ಎರಡೂ ಅವಶ್ಯಕ. ಅದಕ್ಕೆ ನಿಮ್ಮಲ್ಲಿ ತಾಳ್ಮೆಯಿರಬೇಕು.
ಶೀಘ್ರವಾಗಿ ಶ್ರೀಮಂತರಾಗಲು ಹೊರಟವರು ಸಂಪೂರ್ಣವಾಗಿ ಪತನ ಹೊಂದಿದ್ದನ್ನು ನೀವು ನೋಡಿರಬಹುದು. ಯಶಸ್ಸಿಗೆ ಹತ್ತಿರದ ದಾರಿ ಹುಡುಕಲು ಹೊರಟರೆ ಯಶಸ್ಸೇ ದೂರಹೋಗುವ ಸಂಭವವಿದೆ. ಆದುದರಿಂದ ಶೀಘ್ರ ಫಲಿತಾಂಶಕ್ಕಾಗಿ ಹಾತೊರೆದು ಶೀಘ್ರವಾಗಿ ಪತನಗೊಳ್ಳುವ ಬದಲು ಸಾವಕಾಶವಾಗಿ ಮೇಲೇರುವುದು ಯಾವತ್ತೂ ಒಳ್ಳೆಯದು.
ನಿಮ್ಮಲ್ಲಿ ತಾಳ್ಮೆ ಬೆಳೆಯಲು ಸಹಾಯ ಮಾಡುವ ಅಪರಿಪೂರ್ಣತೆಗೂ ಸ್ವಲ್ಪ ಅವಕಾಶವನ್ನು ಕೊಡಿ. ನಿಮ್ಮ ಮನಸ್ಸನ್ನು ಮುಕ್ತವಾಗಿರಿಸಿ. ಪೂರ್ವಗ್ರಹಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ಹೊಸ ಉಪಾಯಗಳು ಯಾವ ಕ್ಷಣದಲ್ಲಿ ಬೇಕಾದರೂ ಗೋಚರಿಸಬಹುದು.
ಇವೆಲ್ಲವೂ ನೀವು ಕೆಲಸವನ್ನೇ ಮಾಡಬೇಕಿಲ್ಲ ಎಂಬುದರ ಸೂಚನೆಯಲ್ಲ. ನೀವು ಹೆಚ್ಚಿನ ಜಾಣತನದಿಂದ ಕೆಲಸ ಮಾಡಬೇಕು. ಜೊತೆಗೆ ನಿಮ್ಮ ಅಂತರಂಗದಲ್ಲಿ ಸಂಪೂರ್ಣ ಸ್ಪಷ್ಟತೆಯಿರಬೇಕು. (ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು) (ಪ್ರತಿಕ್ರಿಯಿಸಿ:instagram@gurudev.kannada)