

ಮೈಕೆಲ್ ಜೋಸೆಫ್ಸನ್ ಪ್ರಸಿದ್ಧ ವ್ಯಕ್ತಿ. ಒಮ್ಮೆ ಅವರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದರು. ಒಂದು ನಿಯಮವನ್ನು ವಿವರಿಸುವಾಗ, ಅವರು ತಪ್ಪು ವಿವರಣೆಯನ್ನು ನೀಡಿದರು. ವಿದ್ಯಾರ್ಥಿಯೊಬ್ಬ ಎದ್ದು ನಿಂತು ತರಗತಿಯಲ್ಲೇ, ‘ಸರ್, ನಿಮ್ಮ ವಿವರಣೆ ತಪ್ಪು’ ಎಂದು ಹೇಳಿಬಿಟ್ಟ. ಅವರಿಗೆ ಇರಿಸುಮುರಿಸು ಉಂಟಾಯಿತು. ಪುಸ್ತಕವನ್ನು ನೋಡಿದಾಗ, ತಪ್ಪಾಗಿದೆ ಎಂಬುದು ತಿಳಿಯಿತು. ಆದರೆ ವಿದ್ಯಾರ್ಥಿ ಎಲ್ಲರ ಮುಂದೆ ಹೇಳಿದನಲ್ಲಾ ಎಂದು ಸ್ವಲ್ಪ ಕೋಪ ಬಂದಿತು.
ಮರುಕ್ಷಣ ತಾವು ತಪ್ಪು ಮಾಡಿರುವುದು ಖಚಿತವಾಗಿದೆ; ಅದನ್ನು ಇಲ್ಲ ಎಂದರೆ, ಸುಳ್ಳುಗಳನ್ನು ಹೇಳಬೇಕಾಗುತ್ತದೆ; ನಾನು ಅಧ್ಯಾಪಕನಾಗಿ ಹಾಗೆ ಮಾಡಿದರೆ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ಕೊಟ್ಟಂತಾಗುತ್ತದೆ ಎಂದು ಆಲೋಚಿಸಿದರು. ಮೈಕೇಲ್ ಅವರು ಮರುದಿನ ತಮ್ಮ ತಪ್ಪನ್ನು ತರಗತಿಯಲ್ಲಿ ಒಪ್ಪಿಕೊಂಡರು. ಸರಿಯಾದ ವಿವರಣೆಯನ್ನು ನೀಡಿದರು. ಬೆಲ್ ಹೊಡೆದ ತಕ್ಷಣವೇ, ಹೊರಡಲು ಮುಂದಾದರು. ವಿದ್ಯಾರ್ಥಿಗಳು ಬಿಡಬೇಕಲ್ಲ. ತಪ್ಪನ್ನು ಗುರುತಿಸಿದ್ದ ವಿದ್ಯಾರ್ಥಿಯು ಮೈಕೆಲ್ರ ಬಳಿ ಸಾರಿದ. ‘ಪ್ರೊಫೆಸರ್ ಜೋಸೆಫ್ಸನ್, ಒಬ್ಬ ಹಿರಿಯ ಪ್ರಾಧ್ಯಾಪಕರು ಎಲ್ಲರ ಮುಂದೆ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಗುಣವನ್ನು ನಾನು ಮೊದಲು ನಿಮ್ಮಲ್ಲಿಯೇ ಕಂಡೆ. ಇದು ನಿಮ್ಮ ದೊಡ್ಡತನವನ್ನು ಸೂಚಿಸುತ್ತದೆ’ ಎಂದನು.
ಇಡೀ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎದ್ದು ನಿಂತು ಚಪ್ಪಾಳೆಯ ಸುರಿಮಳೆ ಸುರಿಸಿದರು. ತಪ್ಪನ್ನು ಒಪ್ಪಿಕೊಂಡರೆ ನಮ್ಮ ಗೌರವ ಕಡಿಮೆಯಾಗುವುದಿಲ್ಲ, ಬದಲು ಇತರರಿಗೆ ನಮ್ಮ ಮೇಲಿನ ಶ್ರದ್ಧೆ, ಗೌರವ ಅಧಿಕವಾಗುತ್ತದೆ.