

ಲಖನೌ: ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ(MahaKumbh Stampede)ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಪಘಾತದ ಬಗ್ಗೆ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಈ ಅಪಘಾತ ಅತ್ಯಂತ ದುಃಖಕರವಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಲ್ಲಿ ಸ್ಥಳೀಯ ಆಡಳಿತ ನಿರತವಾಗಿದೆ. ಈ ಸಂಬಂಧ ನಾನೇ ಮುಖ್ಯಮಂತ್ರಿ ಯೋಗಿ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಪ್ರಧಾನಿ ಮೋದಿ ಅವರು ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಾತ್ರಿ ಒಂದರಿಂದ ಎರಡು ಗಂಟೆಯ ನಡುವೆ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಏಕಾಏಕಿ ಜನಸಂದಣಿ ಹೆಚ್ಚಾದ ಕಾರಣ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ಕೆಲವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಮಹಾಕುಂಭಕ್ಕೆ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ.
ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. 13ರಂದು ಆರಂಭವಾದ ಮಹಾಕುಂಭದಲ್ಲಿ ಈವರೆಗೆ 20 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ಇಂದು ಅಂದರೆ ಬುಧವಾರ(ಜನವರಿ 29) 10 ಕೋಟಿ ಜನ ಬರುವ ನಿರೀಕ್ಷೆ ಇದೆ. ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾಗಿರುವ ತ್ರಿವೇಣಿ ಸಂಗಮವನ್ನು ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ, ಮಹಾಕುಂಭದ ಸಮಯದಲ್ಲಿ ಮತ್ತು ವಿಶೇಷವಾಗಿ ಮೌನಿ ಅಮವಾಸ್ಯೆಯಂತಹ ವಿಶೇಷ ಸ್ನಾನದ ದಿನಾಂಕಗಳಲ್ಲಿ ಸ್ನಾನ ಮಾಡಿದರೆ ಜನರ ಪಾಪಗಳನ್ನು ತೊಳೆದು ಅವರಿಗೆ ಮೋಕ್ಷ ಒದಗುತ್ತದೆ ಎಂಬ ನಂಬಿಕೆ ಇದೆ. (ಏಜೆನ್ಸೀಸ್)