

ಬೆಂಗಳೂರು:ಶರಾವತಿ ಪಂಪ್ ್ಡ ಸ್ಟೋರೇಜ್‌ಗೆ ಷರತ್ತು ಬದ್ಧ ಅನುಮತಿ(Conditional permission for Sharavati Pumped Storage) ನೀಡಲು ರಾಜ್ಯ ವನ್ಯ ಜೀವಿ ಮಂಡಳಿ ಸಭೆ ನಿರ್ಧರಿಸಿದೆ.
ವಿದ್ಯುತ್ ಉತ್ಪಾದನಗೆ ಲಿಂಗನಮಕ್ಕಿ ಡ್ಯಾಂ ನಿರ್ಮಿಸಿದ ಸಂದರ್ಭದಲ್ಲಿ 66,000 ಎಕರೆ ಅರಣ್ಯ ಮುಳುಗಡೆಯಾಗಿತ್ತು. ಆದರೆ, ಈಗ ಉದ್ದೇಶಿತ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಕೇವಲ 125 ಎಕರೆ ಅರಣ್ಯ ಪ್ರದೇಶ ನಷ್ಟವಾಗುತ್ತದೆ. ಆದರೆ, 2 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಷರತ್ತು ಬದ್ಧ ಅನುಮೋದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಡೆದ ರಾಜ್ಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉದ್ದೇಶಿತ ಯೋಜನೆ ಪ್ರದೇಶ ವ್ಯಾಪ್ತಿಯಲ್ಲಿ ಸಿಂಹ ಬಾಲದ ಸಿಂಗಳೀಕಗಳಿದ್ದು, ಅದು ಅಳವಿನ ಅಂಚಿನಲ್ಲಿರುವ ಪ್ರಾಣಿಯಾಗಿದೆ. ಈ ಪ್ರಾಣಿ ನೆಲದ ಮೇಲೆ ಓಡಾಡುವುದು ವಿರಳ. ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತದೆ. ಒಂದು ಮರದಿಂದ ಇನ್ನೊಂದು ಮರಕ್ಕೆ ಹೋಗಲು ಅವಕಾಶ ಇರುವ ದಟ್ಟ ಅರಣ್ಯ ಇರುವ ಕಡೆಗಳಲ್ಲಿ ಮಾತ್ರ ವಾಸವಿರುತ್ತದೆ. ಅಂತಹ ಪ್ರದೇಶದಲ್ಲಿ ಯೋಜನೆ ಬೇಡ ಎಂಬುದು ಕೆಲವು ಪರಿಸರ ಪ್ರೇಮಿಗಳ ಆಕ್ಷೇಪವಿತ್ತು.
ಹೀಗಾಗಿ ಅಂತಹ ಪ್ರದೇಶದಲ್ಲಿ ಸರ್ಕಾರಕ್ಕೆ 200-300 ಕೋಟಿ ರೂ. ಹೊರೆಯಾದರೂ ಪರವಾಗಿಲ್ಲ, 7ಕಿ.ಮೀ. ಸುರಂಗ ಕೊರೆದರೆ ಅಳಿವಿನ ಅಂಚಿನ ಪ್ರಾಣಿ ಉಳಿಸಬಹುದು. ಜತೆಗೆ 16 ಸಾವಿರ ಬದಲು 8 ರಿಂದ 9 ಸಾವಿರ ಮರ ಕಡಿದು ಯೋಜನೆ ಕಾರ್ಯಗತಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ಷರತ್ತು ಬದ್ಧ ಅನುಮೋದನೆ ನೀಡಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.
ಸುಸ್ಥಿರ ಅಭಿವೃದ್ಧಿ, ಪ್ರಕೃತಿ ಮತ್ತು ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿ ಇರಬೇಕು. ಈ ನಿಟ್ಟಿನಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಜಾರಿಗೊಳಿಸಬೇಕು. ಪರಿಸರಕ್ಕೆ ಮಾರಕವಾಗದ ಹಾಗೆ ಯೋಜನೆ ಕಾರ್ಯಗತಗೊಳಿಸಲು ಸಭೆ ನಿರ್ಧರಿಸಿತು.
ಜತೆಗೆ ಜೆಎಸ್‌ಡಬ್ಲ್ಯೂ ಕಂಪನಿ ವಿಜಯನಗರ ಜಿಲ್ಲೆ ಗುಡೇಕೋಟೆ ಪವನ ವಿದ್ಯುತ್ ಯೋಜನೆಗೆ ಕೇಬಲ್ ಅಳವಡಿಕೆಗೆ ಅನುಮತಿ ನೀಡಲು ಸಭೆ ಸಮ್ಮತಿಸಿತು. ಹೊನ್ನಾವರ ಬಳಿ ಹೆದ್ದಾರು- ಮಾಗೋಡು-ನಗರಬಸ್ತಿಕೆರೆ ಬಳಿ 32ನೇ ಕಿ.ಮೀ.ನಲ್ಲಿ ಸಂಪರ್ಕ ಸೇತುವೆ ನಿರ್ಮಿಸಲು ಸಭೆ ಅನುಮತಿ ನೀಡಿತು ಎಂದು ತಿಳಿದು ಬಂದಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಉಪಸ್ಥಿತರಿದ್ದರು.