ಸ್ಮಶಾನಕ್ಕೂ ಜಾಗ ಖರೀದಿಸುವ ಸ್ಥಿತಿ, 12 ಸಾವಿರ ಅಂಗನವಾಡಿಗೆ ಜಾಗದ ಬೇಡಿಕೆ

VidhanaSoudha
Published on

ಬೆಂಗಳೂರು: ಸರ್ಕಾರ ತನ್ನ ಜಮೀನನ್ನು ವಿವಿಧ ಉದ್ದೇಶ, ಬೇಡಿಕೆಗೆ ತಕ್ಕಂತೆ ಮಂಜೂರು ಮಾಡುತ್ತಾ ಇದೀಗ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದೆ. ಕಳೆದ ಒಂದೇ ವರ್ಷದಲ್ಲಿ ಸ್ಮಶಾನದ ಜಾಗ ಖರೀದಿಗೆ ಸರ್ಕಾರ 50 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಹರಿಹರ ಶಾಸಕ ಹರೀಶ್ ತಮ್ಮ ಕ್ಷೇತ್ರಕ್ಕೆ ಹೆಚ್ಚುವರಿ ಸ್ಮಶಾನದ ಜಾಗದ ಜಮೀನಿಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಉತ್ತರಿಸಿದ ಸಚಿವರು, ರಾಜ್ಯದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರು.
ಸರ್ಕಾರಕ್ಕೆ ಎಂಥಾ ಪರಿಸ್ಥಿತಿ ಬಂದಿದೆ ಎಂದರೆ, ತನ್ನ ಬಳಿ ಇದ್ದ ಎಲ್ಲಾ ಜಮೀನನ್ನೂ ಮಂಜೂರು ಮಾಡಿದ್ದು, ಇದೀಗ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಲು ಸ್ವಂತ ಜಮೀನು ಇಲ್ಲದೆ ರೈತರಿಂದ ನಾವೇ ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡುವ ಪ್ರಸಂಗಕ್ಕೆ ಬಂದು ನಿಂತಿದ್ದೇವೆ ಎಂದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಮಶಾನಕ್ಕೆ ಭೂ ಮಂಜೂರಾತಿ ಮಾಡಲಾಗದ ಪ್ರಕರಣಗಳಿಗೆ ಸಂಬಂಧಿಸಿ ಪದೇಪದೆ ನ್ಯಾಯಾಯಕ್ಕೆ ಹಾಜರಾಗುವ ಸ್ಥಿತಿ ಎದುರಾಗಿದೆ. ಸುಮಾರು ಕಡೆಗಳಿಗೆ ಸಿಎಂ ಅಥವಾ ನಾವು ಹೋದರೆ ಸ್ಮಶಾನಕ್ಕೆ ಜಾಗ ಕೊಡಿ ಎಂದು ಜನರೇ ಬಂದು ಅರ್ಜಿ ಕೊಡುತ್ತಾರೆ ಎಂದರು.
ಎಸ್ಕಾಂ ಘಟಕಗಳನ್ನು ಸ್ಥಾಪಿಸಲು, ಆಸ್ಪತ್ರೆ ನಿರ್ಮಿಸಲೂ ನಮ್ಮ ಬಳಿ ಜಮೀನು ಇಲ್ಲ. ಅಲ್ಲದೆ, ರಾಜ್ಯಾದ್ಯಂತ 12,000 ಅಂಗನವಾಡಿಗಳ ನಿರ್ಮಾಣಕ್ಕೆ ಇಲಾಖೆಯ ಬಳಿ ಜಾಗ ಕೇಳಿದ್ದಾರೆ. ಆದರೆ, ನಮ್ಮ ಬಳಿ ಕೊಡಲು ಜಾಗ ಇಲ್ಲ. ಇಲಾಖೆಯವರು ಯಾಕೆ ಜಮೀನು ಮಂಜೂರು ಮಾಡಿಲ್ಲ ಎಂದು ಸಿಎಂ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಮಧ್ಯೆ ಇರೋ ಅಲ್ಪ ಸಲ್ಪ ಜಾಗವನ್ನೂ ಮಂಜೂರು ಮಾಡಿಬಿಟ್ಟರೆ, ಸಾರ್ವಜನಿಕರ ಸರ್ಕಾರಿ ಕೆಲಸಕ್ಕೆ ಶಾಲೆ-ಅಂಗನವಾಡಿ, ಆಸ್ಪತ್ರೆಗಳಿಗೆ ಜಾಗ ಇಲ್ಲದಂತಹ ಪ್ರಸಂಗಕ್ಕೆ ಈಗಾಗಲೇ ಸರ್ಕಾರ ಈಡಾಗಿದೆ. ಹೀಗಾಗಿ ಈ ವಿಚಾರವನ್ನು ಸದನದ ಎಲ್ಲಾ ಸದಸ್ಯರು ದಯವಿಟ್ಟು ಗಮನದಲ್ಲಿ ಇಟ್ಟುಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net