

ನವದೆಹಲಿ/ಲಂಡನ್: ಬ್ರಿಟನ್ನಲ್ಲಿ ರೂಪಾಂತರಿ ಕರೊನಾ ವೈರಸ್ ಪಸರಿಸುವಿಕೆ ವೇಗವಾಗಿದ್ದರೂ, ಪರಿಸ್ಥಿತಿ ಕೈಮೀರಿಲ್ಲ. ಚಾಲ್ತಿಯಲ್ಲಿರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಈ ಮಧ್ಯೆ, ಭಾರತ ಸರ್ಕಾರ ಕೂಡ ರೂಪಾಂತರಿ ಸೋಂಕಿನ ಪ್ರಕರಣ ದೇಶದಲ್ಲಿ ಪತ್ತೆಯಾಗಿಲ್ಲ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದೆ. ಬ್ರಿಟನ್ನಲ್ಲಿ ರೂಪಾಂತರಿ ಕರೊನಾ ವೈರಸ್ ವೇಗವಾಗಿ ಪಸರಿಸುತ್ತಿದ್ದು, ಇಡೀ ಜಗತ್ತು ಮತ್ತೆ ತೀವ್ರ ಬಿಕ್ಕಟ್ಟಿಗೆ ಸಿಲುಕಲಿದೆಯೇ ಎಂಬ ಆತಂಕ ಎದುರಾದ ಬೆನ್ನಲ್ಲೇ ಹೇಳಿಕೆಗಳು ಹೊರಬಿದ್ದಿವೆ.
ಕರೊನಾ ತಾರಕಕ್ಕೇರಿದ್ದ ವೇಳೆ ಇದಕ್ಕಿಂತಲೂ ಹೆಚ್ಚು ಪಸರಿಸುವಿಕೆಯನ್ನು ನಾವು ಹಿಡಿತಕ್ಕೆ ತಂದಿದ್ದೇವೆ. ಆ ಅರ್ಥದಲ್ಲಿ ಸದ್ಯದ ಪರಿಸ್ಥಿತಿ ತೀರಾ ಕೈಮೀರಿಲ್ಲ. ಹಾಗೆಂದು ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಡಬ್ಲ್ಯುಎಚ್ಒದ ಅಧಿಕಾರಿ ಮೈಕಲ್ ರಿಯಾನ್ ಹೇಳಿದ್ದಾರೆ. ರೂಪಾಂತರಿ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಹೊಸ ಸವಾಲನ್ನು ನಾವು ನಮ್ಮ ಸಮಗ್ರ ಪ್ರಯತ್ನಗಳ ಮೂಲಕ ಎದುರಿಸಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ಹೇಳಿದ್ದಾರೆ. ಬ್ರಿಟನ್ನಲ್ಲಿ ಈ ವೈರಸ್ ಶೇಕಡ 70 ವೇಗದಲ್ಲಿ ಹರಡುತ್ತಿದೆಯಾದರೂ, ಆಸ್ಪತ್ರೆಗೆ ದಾಖಲಾಗುವ, ಸಾವು ಹಾಗೂ ತೀವ್ರತೆ ಹೊಂದುವ ಲಕ್ಷಣಗಳಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪೌಲ್ ಹೇಳಿದ್ದಾರೆ.
ಸೆಪ್ಟೆಂಬರ್ ಮಧ್ಯದಿಂದ ಭಾರತದಲ್ಲಿ ಕರೊನಾ ಪ್ರಕರಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಜಾಗತಿಕವಾಗಿ ಪ್ರತಿ ಹತ್ತು ಲಕ್ಷಕ್ಕೆ 588ಕ್ಕೆ ಹೋಲಿಸಿದರೆ ಭಾರತದಲಿ ಕೇವಲ 124 ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದಾರೆ. ಕಳೆದ ಏಳು ದಿನಗಳಲ್ಲಿ ಪ್ರತಿ 10 ಲಕ್ಷ ಮಂದಿಗೆ ಎರಡು ಸಾವುಗಳನ್ನು ಭಾರತ ದಾಖಲಿಸುತ್ತಿದೆ. ಜಾಗತಿಕವಾಗಿ ಈ ಸಂಖ್ಯೆ 10 ಇದೆ. 26 ರಾಜ್ಯಗಳು 10,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಲಂಡನ್ನಿಂದ ಸೋಮವಾರ ರಾತ್ರಿ ಭಾರತಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ 20 ಮಂದಿಯಲ್ಲಿ ಕರೊನಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರೂಪಾಂತರಿ ಕರೊನಾ ವೈರಸ್ ಇರಬಹುದೇ ಎಂದು ತಿಳಿಯಲು ಇವರ ಸ್ವಾಬ್ ಮಾದರಿಗಳನ್ನು ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್ನಿಂದ ದೆಹಲಿಗೆ ಬಂದಿಳಿದ 266 ಪ್ರಯಾಣಿಕರಲ್ಲಿ 6 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಬ್ರಿಟನ್ನಿಂದ ಕೋಲ್ಕತಕ್ಕೆ ಬಂದಿಳಿದ ಮತ್ತೊಂದು ವಿಮಾನದಲ್ಲಿದ್ದ 222 ಪ್ರಯಾಣಿಕರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅಹಮದಾಬಾದ್ಗೆ ಬಂದ ಮತ್ತೊಂದು ವಿಮಾನದಲ್ಲಿದ್ದ 275 ಮಂದಿ ಪೈಕಿ ನಾಲ್ವರಿಗೆ ಪಾಸಿಟಿವ್ ಬಂದಿದೆ. ಇವರಲ್ಲಿ ಓರ್ವ ಬ್ರಿಟನ್ ನಾಗರಿಕರು ಇದ್ದಾರೆ. ಅಮೃತಸರಕ್ಕೆ ಬಂದ ವಿಮಾನದಲ್ಲೇ 8 ಮಂದಿಗೆ ಸೋಂಕು ದೃಢಪಟ್ಟಿದೆ. ಮುಂಬೈಗೆ ಆಗಮಿಸಿದ ವಿಮಾನದ ಪ್ರಯಾಣಿಕರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದರಿಗಳ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ.
ಮುಂಬೈ ವಿಮಾನ ನಿಲ್ದಾಣ ಬಳಿಯ ನೈಟ್ ಕ್ಲಬ್ವೊಂದರಲ್ಲಿ ಕರೊನಾ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದ್ದ ಮೋಜುಕೂಟದ ಮೇಲೆ ಪೊಲೀಸರು ಮಂಗಳವಾರ ಮುಂಜಾನೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಗಾಯಕ ಗುರು ರಾಂಧಾವ್, ಸುಸೇನ್ ಖಾನ್ ಸೇರಿ 34 ಮಂದಿಯಗಗಗನ್ನು ಪೊಲೀಸರು ಬಂಧಿಸಿದರು. ಬಳಿಕ ಇವರೆಲ್ಲರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಭಾರತ, ಅಮೆರಿಕ ಸೇರಿದಂತೆ ವಿಶ್ವದ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಟನ್ಗೆ ವಿಮಾನ ಸಂಚಾರವನ್ನು ರದ್ದುಗೊಳಿಸಿವೆ. ಭಾರತ-ಬ್ರಿಟನ್ ನಡುವಿನ ವಿಮಾನ ಸಂಚಾರ ಮಂಗಳವಾರ ರಾತ್ರಿ 12 ಗಂಟೆಗೆ ಸ್ಥಗಿತಗೊಂಡಿದ್ದು, ಡಿಸೆಂಬರ್ 31ರವರೆಗೆ ತಾತ್ಕಾಲಿಕ ನಿರ್ಬಂಧ ಇರಲಿದೆ. ರೂಪಾಂತರಿ ಕರೊನಾ ವೈರಸ್ ಪಸರಿಸುವಿಕೆ ತಡೆಗಟ್ಟಲು ಮಂಗಳವಾರದೊಳಗಾಗಿ ಬ್ರಿಟನ್ನಿಂದ ಬರುವ ಹಾಗೂ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರ ಎಸ್ಒಪಿ ನಿಯಮ ಬಿಡುಗಡೆ ಮಾಡಿದೆ.
ರೂಪಾಂತರಿ ಕರೊನಾ ವೈರಸ್ಗೆ ಬ್ರಿಟನ್ನ ತಜ್ಞರು ‘ವಿಯುಐ-202012/01’ ಎಂದು ಕರೆದಿದ್ದಾರೆ. ಈ ವೈರಸ್ ಇದಕ್ಕೂ ಮೊದಲು ಪತ್ತೆಯಾದ ರೂಪಾಂತರ ವೈರಸ್ಗಳಿಗಿಂತ ಭಿನ್ನವಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ತಜ್ಞರು ನಿರತರಾಗಿದ್ದಾರೆ. ಇದು ಶೇಕಡ 70ರಷ್ಟು ಹೆಚ್ಚು ವೇಗವಾಗಿ ಹರಡುತ್ತಿದ್ದು, ಇದರ ತೀವ್ರತೆ ಎಷ್ಟು ಪ್ರಮಾಣ ದಲ್ಲಿದೆ?, ಇದು ಮಾರಣಾಂತಿಕವೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೊದಲು ಆಗ್ನೇಯ ಇಂಗ್ಲೆಂಡ್ನಲ್ಲಿ ಪತ್ತೆಯಾದ ಈ ರೂಪಾಂತರಿ ವೈರಸ್ ಇತ್ತೀಚೆಗೆ ದಕ್ಷಿಣ ಇಂಗ್ಲೆಂಡ್ನ ಹಲವು ಭಾಗಗಳಲ್ಲಿ ವರದಿಯಾಗಿದೆ. ಈ ವೈರಸ್ ಸುಮಾರು 23 ಅಂಶಗಳಲ್ಲಿ ಬದಲಾವಣೆ ಹೊಂದಿದೆ. ವೈರಸ್ನ ಪ್ರೋಟೀನ್ಗಳಲ್ಲಿನ 8 ರೂಪಾಂತರ ಕಂಡುಬಂದಿವೆ ಎಂದು ತಜ್ಞರು ಹೇಳಿದ್ದಾರೆ.
ರೂಪಾಂತರಿ ಕರೊನಾ ವೈರಸ್ ವಿರುದ್ಧ ತಮ್ಮ ಲಸಿಕೆ ಕಾರ್ಯ ನಿರ್ವಹಿಸಲಿದೆ ಎಂದು ಬಯೋಎನ್ಟೆಕ್ನ ಸಹಸಂಸ್ಥಾಪಕ ಸಂಸ್ಥೆ ಹೇಳಿಕೊಂಡಿದೆ. ತಮ್ಮ ಲಸಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆಯು ಹೊಸ ರೂಪಾಂತರಿ ವೈರಸ್ ಅನ್ನು ಸಹ ನಿಭಾಯಿಸುತ್ತದೆ. ಅಗತ್ಯವಿದ್ದರೆ 6 ವಾರಗಳಲ್ಲಿ ಈ ವೈರಸ್ ವಿರುದ್ಧದ ಕೆಲಸ ಮಾಡುವ ಲಸಿಕೆಗಳನ್ನು ನಾವು ಉತ್ಪಾದಿಸುತ್ತೇವೆ ಎಂದು ಬಯೋಎನ್ಟೆಕ್ ಹೇಳಿದೆ. ಫೈಜರ್ ಮತ್ತು ಮಾಡರ್ನಾ ಕಂಪನಿಗಳು ಬ್ರಿಟನ್ನಲ್ಲಿ ಪತ್ತೆಯಾದ ರೂಪಾಂತರಿ ವೈರಸ್ ಮೇಲೆ ತಮ್ಮ ಲಸಿಕೆಗಳನ್ನು ಪರೀಕ್ಷಿಸುತ್ತಿವೆ ಎಂದು ತಿಳಿದುಬಂದಿದೆ.
ಕ್ರಿಸ್ವುಸ್ ಹಾಗೂ ಹೊಸ ವರ್ಷಾಚರಣೆಗಾಗಿ ತಮ್ಮ ಮನೆಗಳಿಗೆ ಹಿಂದಿರುಗಲು ಯೋಜನೆ ರೂಪಿಸಿದ್ದ ಬ್ರಿಟನ್ನಲ್ಲಿನ ಅನೇಕ ಭಾರತೀಯರು ವಿಮಾನ ಪ್ರಯಾಣ ನಿರ್ಬಂಧದಿಂದಾಗಿ ಅಲ್ಲಿಯೇ ಸಿಲುಕಿದ್ದಾರೆ. ಬ್ರಿಟನ್ನ ವಿಶ್ವವಿದ್ಯಾಲಯಗಲ್ಲಿ ವ್ಯಾಸಾಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳೂ ಭಾರತಕ್ಕೆ ಬರಲಾಗದೆ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಡಿಸೆಂಬರ್ ಅಂತ್ಯದ ವೇಳೆಗೆ ಭಾರತಕ್ಕೆ ಮರಳುವ ಸಲುವಾಗಿ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಆ ವಿಮಾನಗಳ ಪ್ರಯಾಣ ರದ್ದಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.