ಪುರಸಭೆ ಅಧ್ಯಕ್ಷ, ಸದಸ್ಯರ ನಿರ್ಲಕ್ಷೃಕ್ಕೆ ಖಂಡನೆ

RemasterDirector_1a5c03258
Published on

ಶಕ್ತಿದೇವತೆಗಳ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಗೆ ಆಹ್ವಾನ ನೀಡದ ಹಿನ್ನೆಲೆ

ಪಿರಿಯಾಪಟ್ಟಣ : ಪಟ್ಟಣದ ಶಕ್ತಿ ದೇವತೆಗಳ ಜಾತ್ರಾ ಮಹೋತ್ಸವಕ್ಕೆ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾಲೂಕು ಆಡಳಿತ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ ಎಂದು ಪುರಸಭಾ ಅಧ್ಯಕ್ಷ ಪ್ರಕಾಶ್ ಸಿಂಗ್ ದೂರಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣದ ಶಕ್ತಿ ದೇವತೆಗಳ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತದ ವತಿಯಿಂದ ಸಭೆಗಳನ್ನು ಕರೆಯುತ್ತಿದ್ದು. ಆ ಸಭೆಗಳಲ್ಲಿ ಹಲವು ಇಲಾಖೆಗಳಿಗೆ ಅವರದೇ ಆದ ಕರ್ತವ್ಯಗಳನ್ನು ವಹಿಸುತ್ತಿದ್ದರು. ಸಭೆಗೆ ಬಾದೇ ಇದ್ದ ಇಲಾಖೆಗಳಿಗೆ ಮಾಹಿತಿ ನೀಡಿ ಮತ್ತೊಂದು ಸಭೆಗೆ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು, ಆದರೆ ಈ ವರ್ಷ ಕಾಟಾಚಾರಕ್ಕೆ ಸಭೆ ಕರೆದು ಕೆಲವೇ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪುರಸಭಾ ಸದಸ್ಯರಿಗೂ ಮಾಹಿತಿ ನೀಡದೆ ಕೇವಲ ಫೋನ್ ಕರೆಯ ಮೂಲಕ ಆಹ್ವಾನಿಸಿದ್ದಾರೆ. ಅಧಿಕಾರಿಗಳ ಈ ನಡೆ ಪುರಸಭೆಯ ಸದಸ್ಯರುಗಳಿಗೆ ಬೇಸರ ತರಿಸಿದ್ದು, ಪುರಸಭೆಯ ಅಧ್ಯಕ್ಷನಾಗಿ ಖಂಡಿಸುತ್ತೇನೆ ಎಂದರು.

ಅಧಿಕಾರಿಗಳ ಇಂತಹ ವರ್ತನೆಯನ್ನು ಶಾಸಕರು ಗಮನಿಸಬೇಕು. ಈ ಕೂಡಲೇ ತಾಲೂಕು ಆಡಳಿತದ ಅಧಿಕಾರಿಗಳಿಗೆ ತಿಳಿ ಹೇಳುವ ಮೂಲಕ ಪುರಸಭಾ ಸದಸ್ಯರ ವಿಶ್ವಾಸ ಪಡೆದು ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಲು ಸಹಕರಿಸಬೇಕೆಂದು ತಿಳಿಸಿದರು

ಪುರಸಭಾ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಅವರಿಗೆ ಹಬ್ಬದ ಬಗ್ಗೆ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ದೂರಿದರು. ಶಿಷ್ಟಾಚಾರದಲ್ಲಿ ಅವಕಾಶವಿದ್ದರೆ ಪುರಸಭಾ ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಲಾಗುವುದೆಂದು ತಿಳಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪಟ್ಟಣದ ಅಂದವನ್ನು ಹೆಚ್ಚಿಸುವ ಸಲುವಾಗಿ ವಿದ್ಯುತ್ ಅಲಂಕಾರ ಹಾಗೂ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಸಿಬ್ಬಂದಿಗಳೊಂದಿಗೆ ಸದಸ್ಯರು ಸಹ ಕೈಜೋಡಿಸಿ ಜಾತ್ರೆ ಯಶಸ್ವಿಗೆ ಹಗಲಿರುಳೆನ್ನದೆ ಕೆಲಸ ಮಾಡುತ್ತಾರೆ. ಆದರೆ ಸಭೆಗಳಿಗೆ ಅಧ್ಯಕ್ಷರನ್ನು ಆಹ್ವಾನಿಸದೇ ಸಭೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಪುರಸಭೆ ಉಪಾಧ್ಯಕ್ಷೆ ಸುವರ್ಣ ರವಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಹರ್ಷದ್, ಸದಸ್ಯರಾದ ಪಿ.ಸಿ. ಕೃಷ್ಣ, ನಿರಂಜನ್, ಪ್ರಕಾಶ್, ವಿನೋದ್, ಪುಷ್ಪಲತಾ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net