

ಕೋಲಾರ: ಕೋಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ, ನಗರ ಹೊರವಲಯದ ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ದೇವರಾಜ ಅರಸು ವೈದ್ಯಕೀಯ ವಿವಿ ಉಪಕುಲಪತಿ ಡಾ.ವೆಂಗಮ್ಮ ಮಾತನಾಡಿ, ದೇಶದಲ್ಲಿ ದುಡಿಯುವ ಮಹಿಳೆಗೆ ರಕ್ಷಣೆ ನೀಡಬೇಕು, ಗುರುವಾರಷ್ಟೇ ಸ್ವಾತಂತ್ರ್ಯ ದಿನ ಆಚರಿಸಲಾಗಿದೆ. ಆದರೆ ದೇಶದಲ್ಲಿ ಇದುವರೆಗೂ ಮಹಿಳೆಯರಿಗೆ ಯಾವುದೇ ರೀತಿ ಸ್ವಾತಂತ್ರ್ಯ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರಮಹಾಲಕ್ಷಿ ಪೂಜೆ ನಡೆಸುತ್ತಿದ್ದೇವೆ, ಮಹಿಳೆಯನ್ನು ಲಕ್ಷ್ಮಿ, ದುರ್ಗೆ ಎಂದು ಆರಾಧಿಸುತ್ತೇವೆ, ಆದರೆ ನಡುರಾತ್ರಿಯಲ್ಲಿ ದುಡಿಯುವ ಮಹಿಳೆಗೆ ರಕ್ಷಣೆ ಇಲ್ಲದಿರುವಾಗ ಲಕ್ಷ್ಮಿ ಪೂಜೆ, ಸ್ವಾತಂತ್ರ್ಯ ದಿನ ಆಚರಿಸಿ ಏನು ಉಪಯೋಗ, ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುರ್ಷ್ಕುಮಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳ ಬಳಿ ಸೂಕ್ತ ಭದ್ರತೆ, ವಾರ್ಡ್ಗಳಲ್ಲಿ ಸಿಸಿ ಟಿ.ವಿ ಅಳವಡಿಕೆ, ಮಹಿಳಾ ವೈದ್ಯರ ಕ್ಯಾಬಿನ್‌ಗೆ ಪುರುಷರ ಪ್ರವೇಶ ನಿಷೇಧ, ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ತಕ್ಷಣವೇ ಭದ್ರತೆಯ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಮುಖ್ಯಆಡಳಿತಾಧಿಕಾರಿ ಡಿವಿಎಲ್‌ಎನ್.ಪ್ರಸಾದ್, ಕುಲಸಚಿವ ಡಾ.ಮುನಿನಾರಾಯಣ, ವೈದ್ಯಕೀಯ ಅಧ್ಯಕ್ಷ ಡಾ.ಕೃಷ್ಣಪ್ಪ, ಪ್ರೊ. ಡಾ.ರವೀಶ್, ಪ್ರೊ.ಡಾ.ಪ್ರಕಾಶ್‌ದಾವೆ, ಪ್ರೊ.ಡಾ.ಕೃಷ್ಣಪ್ರಸಾದ್, ಬ್ಯಾಲಹಳ್ಳಿ ಡಾ.ಮನೋಹರ್‌ಗೌಡ ಇತರರಿದ್ದರು.
ಬಾಕ್ಸ್...
ಇಂದಿನ ಮುಷ್ಕರದಲ್ಲಿ ಭಾಗಿ
ಕೋಲ್ಕತ್ತದ ಆರ್‌ಜಿ ಕರ್ ವೈದ್ಯ ಕಾಲೇಜಿನಲ್ಲಿ ಕರ್ತವ್ಯ ನಿರತ 32 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ಶನಿವಾರ ಕರೆ ನೀಡಿರುವ ರಾಷ್ಟವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಪ್ರತಿಭಟಿಸುತ್ತೇವೆ ಎಂದು ವೈದ್ಯರು ತಿಳಿಸಿದರು.