ರಾಮ ಭಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಖಂಡನೆ

bjp
ಹಿಂದು ಕಾರ್ಯಕರ್ತರ ವಿರುದ್ಧ ದೂರುಗಳನ್ನು ದಾಖಲಿಸಿರುವುದನ್ನು ಖಂಡಿಸಿ ಕೋಲಾರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಕೋಲಾರ: ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರವು ಸುಳ್ಳು ದೂರುಗಳನ್ನು ದಾಖಲಿಸುತ್ತಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಹಿಂದು ಪರ ಸಂಟನೆಗಳ ಮುಖಂಡರು ರಸ್ತೆ ತಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಿಯಾಂಕ್ ರ್ಖಗೆ, ವೆಂಕಟೇಶ್, ಸಚಿವರಾದ ಎಚ್.ಅಂಜನೇಯಲು ವಿರುದ್ಧ ಘೋಷಣೆ ಕೂಗಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಒಂದು ಕೋಮಿನವರನ್ನು ಮೆಚ್ಚಿಸಲು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರು ಇತ್ತೀಚಿನ ದಿನಗಳಲ್ಲಿ ಮೋದಿ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ರಾಮನ ಭಕ್ತರು, ಕರ ಸೇವಕರ ವಿರುದ್ಧ ಆರೋಪ ಮಾಡಿ ಬಂಧಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣದ ಕನಸು ನನಸು ಮಾಡುತ್ತಿದ್ದಾರೆ. ದೇಶದಲ್ಲಿ ರಾಮಜಪ ನಡೆಯುತ್ತಿದೆ. ಕಾರ್ಯಕರ್ತರ ವಿರುದ್ಧ 31 ವರ್ಷಗಳ ಹಿಂದೆ ದಾಖಲಾಗಿದ್ದ ಸುಳ್ಳು ಪ್ರಕರಣಗಳನ್ನು ಮರು ತನಿಖೆಗೆ ಆದೇಶಿಸಿ ಬಂಧಿಸುವಂತೆ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶದಲ್ಲಿ ಇಡೀ ಜಗತ್ತು ಮೆಚ್ಚುವ ಪುಣ್ಯದ ಕೆಲಸ ನಡೆಯುತ್ತಿರುವ ವೇಳೆ ಸಿದ್ದರಾಮಯ್ಯ ಒಂದು ಕೋಮಿನವರ ಮಾತು ಕೇಳಿಕೊಂಡು ಅಧಿಕಾರ ದರ್ಪ ತೋರುತ್ತಿದ್ದಾರೆ ಎಂದರು.
ಸಾಕಷ್ಟು ಮಂದಿ ಹೆಸರಿನಲ್ಲಿ ರಾಮನ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯನ ರೀತಿ ಯಾರು ವರ್ತಿಸುತ್ತಿಲ್ಲ. ರಾಮನನ್ನು ನಾವೇನು ಚುನಾವಣೆಗೆ ಬಳಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ನವರು ಸಹಿಸಿಕೊಳ್ಳಲಾಗದೆ ಟೀಕಿಸುತ್ತಿದ್ದಾರೆ. ರಾಮನ ವಿರುದ್ಧ ಆರೋಪ ಮಾಡಿರುವ ಸಚಿವರಾದ ಎಚ್.ಆಂಜನೇಯಲು, ಪ್ರಿಯಾಂಕ್ರ್ಖಗೆ, ವೆಂಕಟೇಶ್ ಅವರನ್ನು ಸಚಿವ ಸಂಪುಟದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಕೋಲಾರದಲ್ಲಿ ದೇವಾಲಯಗಳ ಜಮೀನನ್ನು ವಕ್ಫ್ ಬೋರ್ಡ್ಗೆ ಖಾತೆ ಮಾಡಿಕೊಡಲು ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡದಿದ್ದರೆ ನಾವೆಲ್ಲ ಜೈಲಿಗೆ ಹೋಗಲು ಸಿದ್ಧ. ಕೂಡಲೇ ಬಿಡುಗಡೆ ಮಾಡದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ನಗರಸಭೆ ಸದಸ್ಯ ಪ್ರವಿಣ್ಗೌಡ, ಮಾಜಿ ಶಾಸಕ ವೈ.ಸಂಪಂಗಿ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯ್ಕುಮಾರ್, ಓಂಶಕ್ತಿ ಚಲಪತಿ, ಪದಾಧಿಕಾರಿಗಳಾದ ಮಾಗೇರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರ, ಹನುಮಂತಪ್ಪ, ಓಹಿಲೇಶ್, ರಾಜೇಶ್ಸಿಂಗ್, ಮಮತಾ, ವಾಸು, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net