ಕಸ್ತೂರಿ ರಂಗನ್ ವರದಿ; ಅರಣ್ಯ ಸಚಿವರ ಹೇಳಿಕೆಗೆ ಕಳವಳ

V Sunil Kumar
Published on

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿ ವಿಷಯದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳಬಾರದು. ಈ ವರದಿಯನ್ನು ಯಥಾವತ್ ಜಾರಿಗೆ ತರಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಯು ಪಶ್ಚಿಮಘಟ್ಟದ ಜನರ ನೆತ್ತಿಯ ತೂಗುಗತ್ತಿಯಿಟ್ಟಿದೆ ಎಂದು ಮಾಜಿ ಮಂತ್ರಿ ವಿ.ಸುನಿಲ್‌ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವರದಿ ಯಥಾವತ್ ಜಾರಿಯಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಜನಜೀವನ, ಅರಣ್ಯಾಶ್ರಿತರ ಬದುಕು ಹೈರಾಣಾಗುತ್ತದೆ. ವರದಿ ಜಾರಿ ಅವೈಜ್ಞಾನಿಕವಷ್ಟೇ ಅಲ್ಲ, ಅಮಾನವೀಯ. ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ಕಳುಹಿಸುವ ಮುನ್ನ ಇನ್ನಷ್ಟು ಚರ್ಚೆಯ ಅಗತ್ಯವಿದೆ. ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪಶ್ಚಿಮಘಟ್ಟ ಪ್ರದೇಶದ ಆರೇಳು ಶಾಸಕರು ವಿರೋಧಿಸಿದ್ದೆವು. ಈ ಹಿನ್ನೆಲೆಯಲ್ಲಿ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಲು ಅಂದಿನ ಸರ್ಕಾರ ತಾತ್ವಿಕ ನಿರ್ಧಾರ ತೆಗೆದುಕೊಂಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರವು ಸಕಾರಾತ್ಮಕ ನಿಲುವು ತಳೆದು, ಪಶ್ಚಿಮಘಟ್ಟದ ಜನರ ಆತಂಕ ದೂರ ಮಾಡುವುದು ತುರ್ತು ಅಗತ್ಯವಾಗಿದೆ.

ಜನ, ಅರಣ್ಯ ಹಾಗೂ ಬದುಕು ಒಂದಕ್ಕೊಂದು ಕೊಂಡಿಯಾಗಿವೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆ ಪರವಾಗಿ ಚಿಂತನೆ ಮಾಡಬೇಕು. ಜನರನ್ನು ದೂರವಿಟ್ಟು ನಡೆಸುವ ಸಂರಕ್ಷಣೆ ಎಲ್ಲಿಯೂ ಸಲವಾಗಿಲ್ಲವೆಂದು ವಿ.ಸುನಿಲ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net