ಸಮಗ್ರ ನೋಟ 2024: ಮರೆಯಾದ ಮಹನೀಯರು

ವಿಜಯವಾಣಿ (4)
Published on

ಕಾಲಚಕ್ರದ ಓಟದಲ್ಲಿ ಮತ್ತೊಂದು ವರ್ಷ ಹಿಂದೆ ಹೋಗುತ್ತಿದೆ. ಆದರೆ, 2024ರಲ್ಲಿ ಅನೇಕ ಖ್ಯಾತನಾಮರನ್ನು, ಸಾಧಕರನ್ನು ಈ ದೇಶ, ನಾಡು ಕಳೆದುಕೊಂಡಿತು. ಇಂಥ ನಷ್ಟ ಒಂದು ಬಗೆಯ ಶೂನ್ಯವನ್ನೇ ಸೃಷ್ಟಿಸಿಬಿಡುತ್ತದೆ. ಹೀಗೆ ಅಗಲಿದವರು ಭೌತಿಕವಾಗಿ ನಮ್ಮೊಡನೆ ಇಲ್ಲದೆ ಹೋದರೂ, ಅವರ ಕಾರ್ಯಗಳು, ಸಾಧನೆ ಮತ್ತು ಸಂದೇಶದ ಮೂಲಕ ಸದಾ ಜನರ ನೆನಪಿನಲ್ಲಿ, ಮನಸ್ಸಿನಲ್ಲಿ ಉಳಿಯುತ್ತಾರೆ.

ಡಾ.ಮನಮೋಹನ್ ಸಿಂಗ್

ಭಾರತದ ಆರ್ಥಿಕ ಉದಾರೀಕರಣದ ಹರಿಕಾರನೆಂದೇ ಖ್ಯಾತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಡಿಸೆಂಬರ್ 26ರಂದು ನಿಧನರಾದರು. 2004ರಿಂದ 2014ರವರೆಗೆ ಎರಡು ಬಾರಿ ಪ್ರಧಾನಿಯಾಗಿದ್ದ ಅರ್ಥಶಾಸ್ತ್ರಜ್ಞ ಸಿಂಗ್, ಹಲವು ಆರ್ಥಿಕ ಸುಧಾರಣೆಗಳಿಗೆ ಮುನ್ನುಡಿ ಬರೆದರು. ಆರ್​ಬಿಐ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಕೇಂದ್ರ ಹಣಕಾಸು ಸಚಿವ ಮುಂತಾದ ಹುದ್ದೆಗಳನ್ನು ನಿರ್ವಹಿಸಿದರು. ಐದು ಸಂಪುಟಗಳಲ್ಲಿ ಪ್ರಕಟವಾದ ‘ಚೇಂಜಿಂಗ್ ಇಂಡಿಯಾ’, ಸಿಂಗ್​ರ ಮಹತ್ವದ ಕೃತಿ.

ಸೀತಾರಾಮ್ ಯೆಚೂರಿ

ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್​ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (72) ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 12ರಂದು ನವದೆಹಲಿಯಲ್ಲಿ ನಿಧನರಾದರು. ಪ್ರತಿಷ್ಠಿತ ಜೆಎನ್​ಯುು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಯೆಚೂರಿ, ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ಸಂಸದೀಯ ಪಟುವಾಗಿಯೂ ಛಾಪು ಮೂಡಿಸಿದ್ದರು.

ರಾಮೋಜಿ ರಾವ್

ಭಾರತದ ಮಾಧ್ಯಮ ಹಾಗೂ ಸಿನಿಮಾ ರಂಗದ ಖ್ಯಾತ ಉದ್ಯಮಿ, ರಾಮೋಜಿ ಗ್ರೂಪ್ ಅಧ್ಯಕ್ಷ ಚೇರುಕುರಿ ರಾಮೋಜಿ ರಾವ್ (87) ಜೂನ್ 8ರಂದು ಇಹಲೋಕ ತ್ಯಜಿಸಿದರು. ಜಗತ್ತಿನ ಅತ್ಯಂತ ದೊಡ್ಡ ಸಿನಿಮಾ ಚಿತ್ರೀಕರಣ ಸೌಕರ್ಯಗಳುಳ್ಳ ರಾಮೋಜಿ ಫಿಲ್ಮ ಸಿಟಿಯ ಮಾಲೀಕರಾಗಿದ್ದ ರಾವ್, ಹಲವು ಪತ್ರಿಕೆ ಹಾಗೂ ವಾಹಿನಿಗಳನ್ನು ನಡೆಸಿದ್ದರು. ಸಮಾಜಕ್ಕೆ ಇವರ ಕೊಡುಗೆಯನ್ನು ಪರಿಗಣಿಸಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಇವರ ಮಾಲೀಕತ್ವದ ಉಷಾಕಿರಣ್ ಮೂವೀಸ್ ಅನೇಕ ಸಿನಿಮಾಗಳನ್ನು ನಿರ್ವಿುಸಿದೆ.

ನಟವರ್ ಸಿಂಗ್

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ (93), ಆ.10ರಂದು ನಿಧನರಾದರು. ಜೀವನದ ಬಹುಭಾಗ ಕಾಂಗ್ರೆಸ್​ನಲ್ಲಿದ್ದರೂ 2006ರಲ್ಲಿ ಆ ಪಕ್ಷದಿಂದ ಅಮಾನತುಗೊಂಡರು. ಭಾರತೀಯ ವಿದೇಶಾಂಗ ಸೇವೆಗೆ (ಐಎಫ್​ಎಸ್) ಸೇರಿದವರಾದ ಸಿಂಗ್, ರಾಜತಾಂತ್ರಿಕರಾಗಿ ಅನುಭವ ಹೊಂದಿದ್ದರು. ‘ಒನ್ ಲೈಫ್ ಈಸ್ ನಾಟ್ ಇನಫ್’- ಇದು ಸಿಂಗ್​ರ ಆತ್ಮಕಥನ ಕೃತಿಯಾಗಿದೆ.

ಡಾ.ಕಮಲಾ ಹಂಪನಾ

ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯಾಗಿದ್ದ ಡಾ. ಕಮಲಾ ಹಂಪನಾ (88) ಜೂನ್22ರಂದು ನಿಧನರಾದರು. ವಯೋಸಹಜ ಸಮಸ್ಯೆ ಎದುರಿಸುತ್ತಿದ್ದ ಇವರು ಹೃದಯಾಘಾತದಿಂದ ಕೊನೆಯುಸಿರೆಳೆದರು.

ಭಾರತೀಯ ಕೈಗಾರಿಕಾ ರಂಗದ ‘ರತ್ನ’ ಎಂದೇ ಖ್ಯಾತರಾಗಿದ್ದ ದಿಗ್ಗಜ ಹಾಗೂ ಪರೋಪಕಾರಿ, ಟಾಟಾ ಸಮೂಹ ಹಾಗೂ ಟಾಟಾ ಸನ್ಸ್​ನ ಅಧ್ಯಕ್ಷರಾಗಿದ್ದ ರತನ್ ನವಲ್ ಟಾಟಾ (86), ಅಕ್ಟೋಬರ್ 9ರಂದು ಮುಂಬೈಯಲ್ಲಿ ನಿಧನರಾದರು. ಭಾರತದ ಕೈಗಾರಿಕಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ರತನ್, ಒಬ್ಬ ಮಾದರಿ ಕೈಗಾರಿಕೋದ್ಯಮಿಯಾಗಿ ಸ್ಪೂರ್ತಿಯ ಚಿಲುಮೆಯಾಗಿದ್ದರು. ಪದ್ಮ ಭೂಷಣ, ಪದ್ಮ ವಿಭೂಷಣ ಸಹಿತ ಹಲವು ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ಜಾಕಿರ್ ಹುಸೇನ್

ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ (73) ತೀವ್ರ ಅನಾರೋಗ್ಯದಿಂದ ಡಿಸೆಂಬರ್ 5ರಂದು ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ನಿಧನರಾದರು. ತಾಳವಾದ್ಯಗಾರ, ಸಂಗೀತಗಾರ, ಸಂಗೀತ ನಿರ್ವಪಕ, ಸಿನಿಮಾ ನಟ- ಹೀಗೆ ಬಹುಮುಖ ಪ್ರತಿಭೆಯ ಹುಸೇನ್, ಮೂರೂ ಪದ್ಮ ಪ್ರಶಸ್ತಿಗಳಿಗೆ (ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ) ಭಾಜನರಾಗಿದ್ದರು. ಉತ್ತಮ ಜಾಗತಿಕ ಸಂಗೀತಕ್ಕಾಗಿ ಗ್ರಾಮಿ ಪುರಸ್ಕೃತರೂ ಆಗಿದ್ದರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಹಿರಿಮೆಯ ಇವರು ಹಲವು ಸಂಗೀತ ಬ್ಯಾಂಡ್​ಗಳ ಭಾಗವಾಗಿದ್ದರು.

ರಾಜೀವ್ ತಾರಾನಾಥ್

ಬೆಂಗಳೂರಿನಲ್ಲಿ ಜನಿಸಿದ, ಭಾರತೀಯ ಶಾಸ್ತ್ರೀಯ ಸಂಗೀತಗಾರರಾದ ರಾಜೀವ್ ತಾರಾನಾಥ್ ಸರೋದ್ ವಾದನದಲ್ಲಿ ಛಾಪನ್ನು ಮೂಡಿಸಿದ್ದರು. ಅಲಿ ಅಕ್ಬರ್ ಖಾನ್​ರ ಶಿಷ್ಯರಾಗಿದ್ದ ರಾಜೀವ್ (91) ಜೂನ್ 11ರಂದು ಮೈಸೂರಿನಲ್ಲಿ ನಿಧನರಾದರು. ಬಾಲ್ಯದಿಂದಲೇ ಸಂಗೀತದಲ್ಲಿ ಒಲವಿದ್ದ ಇವರು, ಇಂಗ್ಲಿಷ್ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಸಂಗೀತವನ್ನೇ ಜೀವನದ ಉಸಿರಾಗಿಸಿಕೊಂಡವರು. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮೊದಲಾದ ಗೌರವಗಳಿಂದ ಪುರಸ್ಕೃತರಾಗಿದ್ದರು.

ಪ್ರಭಾ ಅತ್ರೆ

ಭಾರತೀಯ ಶಾಸ್ತ್ರೀಯ ಹಾಡುಗಾರ್ತಿ ಪ್ರಭಾ ಅತ್ರೆ (91), ಭಾರತ ಸರ್ಕಾರದ ಮೂರೂ ಪದ್ಮ ಪ್ರಶಸ್ತಿಗಳಿಂದ ಪುರಸ್ಕೃತರಾದ ಪ್ರಖ್ಯಾತ ಗಾಯಕಿ. ಉಸಿರಾಟದ ತೊಂದರೆಗೆ ಒಳಗಾದ ಅತ್ರೆ, ಜನವರಿ 13ರಂದು ಪುಣೆಯಲ್ಲಿ ನಿಧನರಾದರು. ಇವರು ಹಿಂದುಸ್ತಾನಿ ಸಂಗೀತಕ್ಕಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೂ ಪಾತ್ರರಾದರು. ಪ್ರಭಾ ಅತ್ರೆ, ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮರಾಠಿ ರಂಗಭೂಮಿಯ ಸಂಗೀತ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದರು.

ಶ್ಯಾಮ್ ಬೆನಗಲ್

ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ಸಾಕ್ಷ್ಯಚಿತ್ರ ನಿರ್ವಪಕ ಶ್ಯಾಮ್ ಬೆನಗಲ್ (90), ಪರ್ಯಾಯ ಸಿನಿಮಾದ ಪ್ರವರ್ತಕ ಎಂಬ ಖ್ಯಾತಿ ಪಡೆದವರು. 18 ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ಒಂದು ಫಿಲ್ಮಫೇರ್ ಪ್ರಶಸ್ತಿ ಮತ್ತು ನಂದಿ ಪ್ರಶಸ್ತಿ ಪುರಸ್ಕೃತರಾದ ಬೆನಗಲ್, ಡಿಸೆಂಬರ್ 23ರಂದು ಮುಂಬೈಯಲ್ಲಿ ನಿಧನರಾದರು. ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಇವರ ಮುಡಿಗೇರಿತ್ತು. ಡಿ

ಅಪರ್ಣಾ ವಸ್ತಾರೆ

ನಟಿ ಹಾಗೂ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ (57) ಶ್ವಾಸಕೋಶದ ಕ್ಯಾನ್ಸರ್​ನಿಂದ ಜುಲೈ 11ರಂದು ನಿಧನರಾದರು. ‘ಮಸಣದ ಹೂವು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಇನ್ಸ್​ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ, ಕಿರುತೆರೆಯ ಕೆಲ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು.

ಮನೋಹರ್ ಜೋಷಿ

ಶಿವಸೇನೆಯ ಹಿರಿಯ ನಾಯಕರಾಗಿದ್ದ ಮನೋಹರ್ ಗಜಾನನ ಜೋಷಿ, 1995ರಿಂದ 1999ರ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 2002ರಿಂದ 2004ರ ವರೆಗೆ ಲೋಕಸಭೆಯ ಸ್ಪೀಕರ್ ಕೂಡ ಆಗಿದ್ದ ಜೋಷಿ (86), ಫೆಬ್ರವರಿ 23ರಂದು ಮುಂಬೈಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ದ್ವಾರಕೀಶ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ವಪಕ ದ್ವಾರಕೀಶ್ (81) ಏಪ್ರಿಲ್ 16ರಂದು ನಿಧನ ಹೊಂದಿದರು. ಚಿತ್ರ ನಿರ್ವಣ, ನಿರ್ದೇಶನದಲ್ಲೂ ಹೆಸರು ಮಾಡಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ಸುಬ್ರಹ್ಮಣ್ಯ ಧಾರೇಶ್ವರ

ಬಡಗುತಿಟ್ಟು ಯಕ್ಷಗಾನ ಕಲಾವಿದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಇವರು ಅಪಾರ ಅಭಿಮಾನಿ ಬಳಗ ಹೊಂದಿದ್ದರು.

ಪಂಕಜ್ ಉದಾಸ್

ಸುವಿಖ್ಯಾತ ಗಝುಲ್ ಮತ್ತು ಹಿಂದಿ ಸಿನಿಮಾ ಹಾಗೂ ಪಾಪ್ ಗಾಯಕ ಪಂಕಜ್ ಉದಾಸ್ (72), ಫೆಬ್ರವರಿ 26ರಂದು ಇಹಲೋಕ ತ್ಯಜಿಸಿದರು. ಗಝುಲ್ ಹಾಡುಗಾರಿಕೆ ಕ್ಷೇತ್ರ ಹಾಗೂ ಕ್ಯಾನ್ಸರ್ ರೋಗಿಗಳು ಮತ್ತು ಥಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, 2006ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಶಶಿ ರೂಯ

ರೂಯ ಸೋದರರೆಂದೇ ಪ್ರಸಿದ್ಧರಾದ ಶಶಿ ರೂಯ ಮತ್ತು ರವಿ ರೂಯ ಪೈಕಿ ಶಶಿ ಹಿರಿಯರು. ಬಿಲಿಯಾಧಿಪತಿಗಳಾದ ಇವರು ಎಸ್ಸಾರ್ ಸಮೂಹದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಶಶಿ ರೂಯ 80ನೇ ವಯಸ್ಸಿನಲ್ಲಿ ನವೆಂಬರ್ 25ರಂದು ನಿಧನರಾದರು. ರೂಯ ಸೋದರರು ಜಗತ್ತಿನ ಅತಿ ಶ್ರೀಮಂತ ಭಾರತೀಯರು ಎಂದು 2012 ರಲ್ಲಿ ಫೋರ್ಬ್ಸ್ ಪತ್ರಿಕೆ ಪಟ್ಟಿ ಮಾಡಿತ್ತು.

ಸುಶೀಲ್ ಕುಮಾರ್ ಮೋದಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಶೀಲ್ ಕುಮಾರ್ ಮೋದಿ (72), ಬಿಹಾರದಿಂದ ರಾಜ್ಯಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಬಿಹಾರ ವಿತ್ತ ಸಚಿವ ಹಾಗೂ ಉಪ ಮುಖ್ಯಮಂತ್ರಿಯೂ ಆಗಿದ್ದ ಮೋದಿ, ಮೇ 13ರಂದು ನಿಧನರಾದರು.

ಎಸ್.ಎಂ.ಕೃಷ್ಣ

ಕರ್ನಾಟಕದ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ (92) ಅವರು ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವ ಸ್ಥಾನಗಳನ್ನು ಅಲಂಕರಿಸಿ ಆ ಹುದ್ದೆಗಳಿಗೆ ಘನತೆ ತಂದುಕೊಟ್ಟರು. ವಯೋಸಹಜ ಕಾಯಿಲೆಯಿಂದ ಅವರು ಡಿಸೆಂಬರ್ 10ರಂದು ನಿಧನರಾದರು.

ಅಗಲಿದ ಇತರ ಪ್ರಮುಖರು

ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್.

ರಾಜ್ಯದ ಮಾಜಿ ಸಚಿವರಾದ ಕೆ.ಎಚ್.ಶ್ರೀನಿವಾಸ್, ಮನೋಹರ್ ತಹಸೀಲ್ದಾರ್, ನಾಗಮ್ಮ ಕೇಶವಮೂರ್ತಿ.

ಮಾಜಿ ಶಾಸಕರಾದ ಎ.ಎಸ್.ಬಸವರಾಜ್, ವಸಂತ ಬಂಗೇರಾ, ಸೈಯದ್ ಶಾ ಖುಸ್ರೋ ಹುಸೇನ್.

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ.

ಚಲನಚಿತ್ರ ನಿರ್ದೇಶಕ ಗುರುಪ್ರಸಾದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net