

ಮೈಸೂರು: ಮೈಸೂರು ದಸರಾ ಇತಿಹಾಸದ 414 ವರ್ಷಗಳಲ್ಲಿಯೇ ಮೊದಲಬಾರಿಗೆ ಮಂಗಳವಾರ ಜಗನ್ಮೋಹನ ಅರಮನೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ದೇಸಿ ಭಾಷೆಗಳಿಗೆ ಸೀಮಿತವಾಗದೆ ಜಗತ್ತಿನ ಎಲ್ಲ ಭಾಷೆಯ ಕಾವ್ಯವನ್ನು ಪರಸ್ಪರರು ಅರ್ಥ ಮಾಡಿಕೊಳ್ಳಬೇಕು, ಬಹಳ ಮುಖ್ಯವಾಗಿ ದೇಶದ ವೈವಿಧ್ಯ ಸಂಸ್ಕೃತಿಯನ್ನು ಅರಿಯುವ ಉದ್ದೇಶದಿಂದ ಸಮಷ್ಠಿ ಈ ಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕನ್ನಡ, ಇಂಗ್ಲಿಷ್, ಒರಿಯಾ, ಹಿಂದಿ,ತೆಲುಗು, ತಮಿಳು, ಮಲೆಯಾಳಿ, ಮಣಿಪುರಿ, ಮರಾಠಿ, ಕೊಂಕಣಿ, ಸಂಸ್ಕೃತ, ಡೋಗ್ರಿ, ಕೊಡವ, ಅರೆಭಾಷೆ, ಅರೆಬಿಕ್,ಬ್ಯಾರಿ, ಸಿಂಧಿ, ಬಂಜಾರ, ಭಾಷೆಯ ಕವಿತೆಗಳನ್ನು ಓದಲಾಯಿತು. ಕವಿಗಳು ತಮ್ಮ ಮಾತೃಭಾಷೆಯಲ್ಲಿ ವಾಚಿಸಿದ ಕವನವನ್ನು ನಂತರ ಅಲ್ಲೇ ಅದನ್ನು ಕನ್ನಡಕ್ಕೆ ಅನುವಾದಿಸಿ ಹೇಳಲಾಗುತ್ತಿತ್ತು.
ತಮಿಳು ಕವಿ ಇಂದಿರನ್ ರಾಜೇಂದ್ರನ್ ಓದಿದ ಕವಿತೆಯನ್ನು ತಮಿಳು ಸೆಲ್ವಿ ಕನ್ನಡಕ್ಕೆ ಅನುವಾದಿಸಿದರು. ‘ನಾವು ಹುಡುಕಿಕೊಳ್ಳುವ ವಿಷಯ ಹೊರಗೆಲ್ಲೂ ಇಲ್ಲ ನನ್ನೊಳಗೇ ಇದೆ, ನನ್ನ ಅಕ್ಷರಗಳಿಗೆ ಮೊದಲ ಓದುಗಳೂ ನೀನೇ, ಕೊನೆಯ ಓದುಗಳೂ ನೀನೆ ಗೆಳತಿ’ ಎಂದು ಮುಕ್ತಾಯವಾಗುವ ‘ಗೆಳತಿಗೊಂದು ಪತ್ರ’ ಕವನ ಕಾವ್ಯಜೀವಿಗಳನ್ನು ಸೆಳೆಯಿತು. ಸಿಂಧಿ ಕವಯಿತ್ರಿ ರಶ್ಮಿ ರಮಣಿ ಓದಿದ ಕವಿತೆ ‘ಕಪಾಟಿನಲ್ಲಿರುವ ನನ್ನ ಪುಸ್ತಕವನ್ನೊಮ್ಮೆ ಮುಟ್ಟಿನೋಡು ನನ್ನ ಹೃದಯದ ಬಡಿತ ನಿನಗೆ ಅರಿವಾಗಬಹುದು’ ಎನ್ನುವ ಸಾಲುಗಳು ಪ್ರೇಕ್ಷಕರನ್ನು ತಾಗಿದವು.
2023ರರ ಪದ್ಮಶ್ರೀ ಪುರಸ್ಕೃತ ಸಾಹಿತಿ ಮೋಹ್‌ಸಿಂಗ್ ವಾಚಿಸಿದ ಡೋಗ್ರಿ ಭಾಷೆಯ ಕವಿತೆ ರೈತರು ಮತ್ತು ಯೋಧರನ್ನು ಕುರಿತದ್ದಾಗಿತ್ತು. ವರ್ತಮಾನದ ಹಲವು ತಲ್ಲಣಗಳಿಗೆ ಧ್ವನಿಯಾಗಿತ್ತು. ಮನುಷ್ಯನೊಳಗಿನ ಹಲವು ತಾಕಲಾಟಗಳಿಗೆ ಅದು ಔಷಧಿಯಂತಿತ್ತು. ರಣರಂಗದ ಯೋಧನ ಏಕಾಂಗಿತನ, ಕೃಷಿಯಲ್ಲಿನ ನಷ್ಟ ಮುಂತಾದವನ್ನು ಕವಿತೆ ವಿಡಂಬನಾತ್ಮಕವಾಗಿ ವಿವರಿಸಿತು.
ಗೋಷ್ಠಿ ಉದ್ಘಾಟಿಸಿದ ಹಿರಿಯ ಕವಿ ಡಾ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಕವಿತೆಗೆ ಭಾಷೆಯ ಮಿತಿಗಳಿಲ್ಲ, ಅದರಾಚೆಗೂ ಅದು ತನ್ನ ಬಾಹುಗಳನ್ನು ಚಾಚಿಕೊಂಡಿರುತ್ತದೆ. ಆದ್ದರಿಂದ ಹಲವು ಭಾಷೆಯ ಕವಿಗಳನ್ನು ಒಂದೇ ವೇದಿಕೆಗೆ ಕರೆತಂದಿರುವುದು ವಿಶೇಷ ಎಂದು ಹೇಳಿ ತಮ್ಮ ಎರಡು ಕವಿತೆಗಳನ್ನು ಓದಿದರು.
ಉಪಸ್ಥಿತರಿದ್ದ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕಮಾರ್ ಮಾತನಾಡಿ, ಹೊರ ಪರಿಸರದ ಕವಿಗಳು ಕನ್ನಡದ ಪರಿಸರ ಅರಿಯಲಿ, ನಾವು ಅವರ ಪರಿಸರ ತಿಳಿಯಲು ಇಂಥದ್ದೊಂದು ಪ್ರಯತ್ನ ಶ್ಲಾಘನೀಯವಾದದ್ದು ಎಂದರು.
ಇಡೀ ದಸರಾದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿ ವಿಶೇಷ ಸದ್ದು ಮಾಡುತ್ತಿದೆ. ಈವರ್ಷ ಪಂಚ ಕಾವ್ಯೋತ್ಸವ ಎಂದು ಐದು ವಿಭಾಗಗಳಾಗಿ ಮಾಡಿ ಎಲ್ಲೆಡೆಯಿಂದ ಕವಿಗಳನ್ನು, ಕಾವ್ಯಾಸಕ್ತರನ್ನು ಕರೆಸಿರುವುದು ಸಂತಸ ಎಂದು ಹೇಳಿದರು.
ಎನ್.ಕೆ.ಲೋಲಾಕ್ಷಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು.