

ಅಭಿವೃದ್ಧಿಗೆ ತೊಡಕಾದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 70 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದ್ದು, ಇತ್ತ ಉಚಿತ ಯೋಜನೆಗಳೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಅತ್ತ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ಸಿಎಂ-ಡಿಸಿಎಂ ಅವರೇ ಈ ಬಾರಿ ಅಭಿವೃದ್ಧಿಗೆ ಅನುದಾನ ಇಲ್ಲವೆಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ತಾಲೂಕಿನಾದ್ಯಂತ ರಸ್ತೆಗಳು ಅಧ್ವಾನಗೊಂಡಿದ್ದು, ಸಾವಿರಾರು ಕೋಟಿ ರೂ. ಅನುದಾನ ಬೇಕಿದೆ. ಇದೇ ರೀತಿ ಎಲ್ಲ ಶಾಸಕರೂ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈಗಿನ ರಾಜ್ಯ ಸರ್ಕಾರ ನನ್ನ ಮತ್ತು ತಂದೆ, ಶಾಸಕ ಜಿ.ಟಿ.ದೇವೇಗೌಡರ ಕ್ಷೇತ್ರಗಳಿಗೆ ವ್ಯವಸ್ಥಿತವಾಗಿ ಅನುದಾನವನ್ನು ತಡೆ ಹಿಡಿಯುತ್ತಿದೆ. ಆದರೂ ಎದೆಗುಂದುವುದಿಲ್ಲ. ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗುವೆ. ಸರ್ಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.
ರೈತರಿಗೆ ಮೋಸ
ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಏಳು ಗಂಟೆ ಇರಲಿ, ಒಂದು ಗಂಟೆಯೂ ವಿದ್ಯುತ್ ಪೂರೈಸುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್ ನೀಡಿದರೆ ವನ್ಯಪ್ರಾಣಿಗಳ ಹಾವಳಿ ನಡುವೆ ಜಮೀನಿಗೆ ತೆರಳಲು ಸಾಧ್ಯವಿಲ್ಲ. ಇನ್ನು ಅಕ್ರಮ-ಸಕ್ರಮಕ್ಕೆ ಹಾಗೂ ಹೊಸ ಟಿ.ಸಿ. ಅಳವಡಿಕೆಗೆ ಅವಕಾಶವಿಲ್ಲ. ಟಿ.ಸಿ. ಬೇಕಾದವರು ಹಣ ಕೊಟ್ಟು ಹಾಕಿಸಿಕೊಳ್ಳಬೇಕಾದ ಸ್ಥಿತಿಗೆ ಸರ್ಕಾರ ರೈತರನ್ನು ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ರೈತರಿಗೆ ಸಕಾಲದಲ್ಲಿ ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದ್ದಲ್ಲಿ ಯಾವುದೇ ಉಚಿತ ಸೌಲಭ್ಯಗಳ ಅವಶ್ಯಕತೆ ಇರಲಿಲ್ಲ. ಆದರೆ, ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ವಿವಿಧ ಗ್ರಾಪಂಗಳ ಅಧ್ಯಕ್ಷರಾದ ಮಧು, ಚನ್ನಯ್ಯ, ಮೈಕ್ ರವಿ, ಉಪಾಧ್ಯಕ್ಷ ಅಣ್ಣಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ಮುದಗನೂರು ಸುಭಾಷ್, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ಎಚ್.ಆರ್.ರಮೇಶ್, ಡೇರಿ ಅಧ್ಯಕ್ಷ ಚನ್ನಕೇಶವ, ಮಾಜಿ ಅಧ್ಯಕ್ಷ ಮಾದೇಗೌಡ, ಮುಖಂಡರಾದ ಮಧು, ರಾಮೇಗೌಡ, ಸ್ವಾಮಿಗೌಡ, ಶ್ರೀನಿವಾಸ್, ಎಇಇ ಬೋಜರಾಜ್, ಎಇ ಪ್ರಭಾಕರ್, ಪಿಡಿಒ ಮಹೇಶ್, ಗುತ್ತಿಗೆದಾರ ಪುರುಷೋತ್ತಮ ರೈ ಮತ್ತಿತರರು ಹಾಜರಿದ್ದರು.
ಎಂಡಿಸಿಸಿ ಬ್ಯಾಂಕ್ ಗಾದಿಗೂ ರಾಜಕೀಯ:
ಮುಳುಗಿ ಹೋಗಿದ್ದ ಡಿಸಿಸಿ ಬ್ಯಾಂಕ್ ಅನ್ನು ಪುನಶ್ಚೇತನಗೊಳಿಸಿ 600 ರಿಂದ 2100 ಕೋಟಿ ರೂ. ವಹಿವಾಟು ನಡೆಸುವ ಹಂತಕ್ಕೆ ತಂದಿದ್ದೇನೆ. ಸಕಾಲದಲ್ಲಿ ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಕ್ರಮ ಕೈಗೊಂಡಿದ್ದೇನೆ. ಇದನ್ನು ಸಹಿಸದೆ ಹಿಂದಿನ ಅಧ್ಯಕ್ಷರು ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ ಆಗಿದೆ ಎಂದು ಸಿಎಂಗೆ ದೂರು ನೀಡಿ ತನಿಖೆ ನಡೆಸಿದರು. ಆದರೆ, ಏನೂ ಸಿಕ್ಕಿಲ್ಲ. ವಿಪರ್ಯಾಸವೆಂದರೆ ಸಿಎಂಗೆ ದೂರು ಸಲ್ಲಿಸಿರುವ ವ್ಯಕ್ತಿಯೇ ಬ್ಯಾಂಕ್‌ನಲ್ಲಿ ಹಣ ದುರುಪಯೋಗ ಮಾಡಿರುವ ಬಾಪ್ತು ಪಾವತಿಸಬೇಕಿದೆ ಎಂದರು.
ನನ್ನನ್ನು ಬ್ಯಾಂಕ್‌ನಿಂದ ದೂರವಿಡಲು ಚಿತಾವಣೆ ನಡೆಸಲಾಗಿದ್ದು, ಆಡಳಿತಾಧಿಕಾರಿ ನೇಮಕಕ್ಕೆ ಯತ್ನ ನಡೆದಿದೆ. ನಾನು ನ್ಯಾಯಾಲಯದಲ್ಲಿ ಇರಬೇಕಾಗಿದ್ದರಿಂದ ಒಂದೂವರೆ ತಿಂಗಳ ಕಾಲ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಕ್ಷೇತ್ರದ ಜನರಿಗೆ ಸ್ಪಷ್ಟಪಡಿಸಿದರು.
ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ. ಏನೇ ಹುನ್ನಾರ ನಡೆಸಿದರೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕರು ಹೇಳಿದರು.