

ಎಚ್.ಡಿ.ಕೋಟೆ: ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 5.60 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಗುಣಮಟ್ಟ ಕಾಪಾಡಿ ಕೊಳ್ಳುವುದರ ಜತೆಗೆ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸೂಚನೆ ನೀಡಿದರು.
ಪಟ್ಟಣದ ಕೃಷ್ಣಾಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ನೀರಾವರಿ ಮಂತ್ರಿಗಳಾಗಿದ್ದ ಗೋವಿಂದ ಕಾರಜೋಳ ಅವರು ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಿದ್ದರು. ಆದರೆ ಅನುಮೋದನೆ ಆಗಿರಲಿಲ್ಲ. ಇದೀಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹಳೆಯ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದರೂ ಕೂಡ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದ ಬಳಿಕ ಹಣ ಬಿಡುಗಡೆಯಾಗಿದೆ ಎಂದರು.
ಕೃಷ್ಣಾಪುರ ಸೇರಿದಂತೆ ತಾಲೂಕಿನ ಒಂಬತ್ತು ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಸರ್ಕಾರದಿಂದ ನಿವೇಶನ ಹಂಚಿಕೆಯಾಗಿದ್ದರೂ ಕೂಡ ಹಕ್ಕು ಪತ್ರ ಸಿಕ್ಕಿಲ್ಲ. ಅಲ್ಲದೆ ಆರ್‌ಟಿಸಿ ಕಾಲಂನಲ್ಲಿ ಮಾಲೀಕರ ಹೆಸರಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
2015ರಲ್ಲಿ ಪೂರ್ಣಗೊಂಡ ಪಟ್ಟಣದ ಬಾಬು ಜಗಜೀವನರಾಮ್ ಭವನ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ. ಹಾಗಾಗಿ ಸಮುದಾಯದ ಮುಖಂಡರ ಜತೆ ಚರ್ಚೆ ಮಾಡಿ ಕ್ರಮ ವಹಿಸಲಾಗುವುದು ಎಂದರು.
ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ನಾನು ಮಂತ್ರಿಯಾಗಿದ್ದ ಸಂದರ್ಭ ಸರ್ಕಾರದಿಂದ ಮೈಸೂರು-ಮಾನಂದವಾಡಿ ರಸ್ತೆ, ಎಚ್.ಡಿ.ಕೋಟೆ ಪಟ್ಟಣಕ್ಕೆ 5 ಕೋಟಿ ರೂ.ವೆಚ್ಚದಲ್ಲಿ ಕಬಿನಿ ಜಲಾಶಯದಿಂದ ಶುದ್ಧ ಕುಡಿಯುವ ನೀರು ಸರಬರಾಜು, ಐಟಿಐ ಕಾಲೇಜು, ವಿದ್ಯುತ್ ಘಟಕ, ಬಸ್ ನಿಲ್ದಾಣ, ತಾರಕ ಏತ ನೀರಾವರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.
ಇನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷನಾಗಿದ್ದ ವೇಳೆ 11,000 ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಕಾಯಂ ಮಾಡಲಾಯಿತು. ಇದರಿಂದ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ 28 ಜನರು ಸರ್ಕಾರಿ ನೌಕರರಾಗಿದ್ದಾರೆ. ತಾಲೂಕು ಅಭಿವೃದ್ಧಿ ಆಗಬೇಕಾದರೆ ತಾಲೂಕಿಗೆ ಮಂತ್ರಿ ಪದವಿ ಸಿಗಬೇಕು. ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಅನಿಲ್ ಚಿಕ್ಕಮಾದು ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಸಿಗಲಿ ಎಂದು ಆಶಿಸಿದರು.
ಪುರಸಭಾ ಸದಸ್ಯೆ ಶಾಂತಮ್ಮ ಗೋವಿಂದರಾಜು, ಪರಶಿವಮೂರ್ತಿ, ಮನುಗನಹಳ್ಳಿ ಮಾದಪ್ಪ, ಪಿ.ನಾಗರಾಜು, ಮಧುಕುಮಾರ್, ಸುರೇಶ್, ಅಶೋಕ್, ಶಿವಯ್ಯ, ರಾಮೇಗೌಡ, ರಾಮಸ್ವಾಮಿ, ನಟಶೇಖರ ಮೂರ್ತಿ, ಮಂಜುನಾಥ್, ಗೌಷಿಯಾ, ಉಡನಾಗರಾಜು, ಸ್ಟೂಡಿಯೋ ಪ್ರಕಾಶ್, ಪ್ರಸಾದ್, ಸೋಮು, ಚಿಕ್ಕಣ್ಣಮೂರ್ತಿ, ಕರಿಯಯ್ಯ, ಮಹೇಂದ್ರ ಇದ್ದರು.