ಮೂರು ತಿಂಗಳಲ್ಲೇ ಮುಡಾ ಕೇಸ್ ತನಿಖೆ ಪೂರ್ಣಗೊಳಿಸಿ

lokayuktha
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮುಡಾ ಹಗರಣದ ತನಿಖೆಯನ್ನು 3 ತಿಂಗಳ ಅವಧಿಯಲ್ಲಿ ಪೂರ್ಣ ಮಾಡಿ ನೇರವಾಗಿ ಕೋರ್ಟ್​ಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 24ಕ್ಕೆ ಮುಂದೂಡಿದ್ದು, ಇದೇ ದಿನ ತನಿಖೆ ಸಹ ಪೂರ್ಣ ಆಗಬೇಕಾಗಿದೆ. ಹೀಗಾಗಿ ಆದಷ್ಟು ಬೇಗ ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸೆ.25(ಬುಧವಾರ) ಮಧ್ಯಾಹ್ನ ಜನಪ್ರತಿನಿಧಿಗಳ ಕೋರ್ಟ್ ಆದೇಶವಾದ ಬಳಿಕ ಸಂಜೆಯವರೆಗೂ ಮೈಸೂರು ಲೋಕಾಯುಕ್ತ ಕಚೇರಿಗೆ ಅದರ ಆದೇಶ ಪ್ರತಿ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್​ಪಿ ಎಫ್​ಐಆರ್ ದಾಖಲಿಸಲು ತಯಾರಿ ಸಹ ಮಾಡಿಕೊಂಡಿದ್ದರು. ಸಂಜೆಯಾದರೂ ಕೋರ್ಟ್ ಆದೇಶ ಪ್ರತಿ ಬರಲಿಲ್ಲ. ಹೀಗಾಗಿ, ಗುರುವಾರ ಬೆಳಗ್ಗೆ ಎಸ್ಪಿಯೇ ಖುದ್ದು ಬೆಂಗಳೂರಿಗೆ ಬಂದು ಆದೇಶ ಪ್ರತಿ ಸಂಗ್ರಹಿಸಿದ್ದಾರೆ. ಎಫ್​ಐಆರ್ ದಾಖಲಿಸಿದ ನಂತರ ತನಿಖಾ ಪ್ರಕ್ರಿಯೆ ಹೇಗೆಲ್ಲ ಎಂಬುದರ ಕುರಿತು ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದುಕೊಂಡಿದ್ದು, ಶುಕ್ರವಾರವೇ ಎಫ್​ಐಆರ್ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಬದಲಿ ನಿವೇಶನದ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಹಗರಣ ಸಂಬಂಧ 6 ವಾರಗಳ ಒಳಗಾಗಿ ಸಿಆರ್​ಪಿಸಿ ಸೆ.156(3) ಅಡಿ ತನಿಖೆ ನಡೆಸಿ 3 ತಿಂಗಳೊಳಗೆ ವರದಿ ಸಲ್ಲಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತರು ತನಿಖೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಯಾವ ಯಾವ ಸೆಕ್ಷನ್​ಗಳು..?: ಭಾರತೀಯ ದಂಡ ಸಂಹಿತೆ 120ಎ(ಕ್ರಿಮಿನಲ್ ಪಿತೂರಿ, ಒಳಸಂಚು, ಜೀವಾವಧಿ ಶಿಕ್ಷೆ), 166 (ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ), 403 (ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ), 406(ಅಪರಾಧಿಕ ನಂಬಿಕೆ ದ್ರೋಹ, 3 ವರ್ಷ ಜೈಲು ಅಥವಾ ದಂಡ), 420 (ವಂಚನೆ), 426 (ಕಿಡಿಗೇಡಿತನ) 465 (ಫೋರ್ಜರಿ), 468 (ಫೋರ್ಜರಿ ಮಾಡಿದ್ದಕ್ಕೆ 5 ಶಿಕ್ಷೆ), 340 (ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು), 351 (ಮುಂದುವರಿದರೆ ದಾಳಿ ಮಾಡುವ ಭಯ ಹುಟ್ಟಿಸುವುದು), 9- ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ), 13 ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆ) ಸೆಕ್ಷನ್ ಮೇಲೆ ತನಿಖೆಗೆ ಸೂಚನೆ ನೀಡಲಾಗಿದೆ. ಜತೆಗೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 9 ಮತ್ತು 13 ಮತ್ತು ಬೇನಾಮಿ ಆಸ್ತಿ ವರ್ಗಾವಣೆ ನಿಷೇಧ ಕಾಯ್ದೆ 1988 ಮತ್ತು ಕರ್ನಾಟಕ ಭೂಮಿ ವಶ (ಗ್ರಾ್ಯಬಿಂಗ್) ಕಾಯ್ದೆ-2011ರ ಸೆಕ್ಷನ್ 3 ಮತ್ತು 4ರ ಅನ್ವಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.

ಲಕ್ಷ್ಮಣ್​ರಿಂದ ಬೆದರಿಕೆ ದೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ವಿರುದ್ಧ ದೂರು ನೀಡಲು ಆಗಮಿಸಿದ್ದ ವಕೀಲ ಪ್ರದೀಪ್ ಕುಮಾರ್ ನೇತೃತ್ವದ ಜೆಡಿಎಸ್ ಕಾರ್ಯಕರ್ತರು, ಎಸ್​ಪಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಲೋಕಾ ಯುಕ್ತ ಕಚೇರಿಯಲ್ಲಿ ದೂರು ನೀಡಲು ಆಗಮಿಸಿದ್ದರು. ಆದರೆ ಎಸ್​ಪಿ ಅವರು ಇರದ ಕಾರಣ ಬರಿಗೈಯಲ್ಲಿ ವಾಪಸಾದರು.

ಲೋಕಾ ಎಸ್​ಪಿ ನಾಪತ್ತೆ ದೂರು: ಈ ನಡುವೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ಕೋರ್ಟ್ ಆದೇಶದ ಪ್ರತಿಯೊಂದಿಗೆ ಮತ್ತೊಮ್ಮೆ ದೂರು ನೀಡಲು ಗುರುವಾರ ಆಗಮಿಸಿ ಸಂಜೆವರೆಗೂ ಲೋಕಾಯುಕ್ತ ಎಸ್​ಪಿ ಅವರನ್ನು ಭೇಟಿ ಮಾಡಲು ಕಾಯ್ದರು. ಸಂಜೆವರೆಗೂ ಅವರು ಬರಲಿಲ್ಲ. ಹೀಗಾಗಿ, ಅವರು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ ಕಡೆಯವರು ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದು ಸ್ವಿಕೃತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net