ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರಕ್ಕೆ ದೂರು

09.pyp.01 (1)
Published on

ಪಿರಿಯಾಪಟ್ಟಣ: ತಾಲೂಕಿನ ಸೀಗೂರು ಗ್ರಾಮದಲ್ಲಿರುವ ಗಣೇಶ್ ಸ್ಪಿನ್ನರ್ಸ್ ಕಾರ್ಖಾನೆಯ ಮಾಲೀಕರು ಖುದ್ದಾಗಿ ಬಂದು ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದಲ್ಲಿ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಶಾಸಕ ಕೆ.ಮಹದೇವ್ ಎಚ್ಚರಿಕೆ ನೀಡಿದರು.

ಆಡಳಿತ ಮಂಡಳಿ ವೇತನ ನೀಡುತ್ತಿಲ್ಲವೆಂದು ಆರೋಪಿಸಿ, ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವರ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಕಾರ್ಖಾನೆಯ ಆವರಣದಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಹತ್ತು ದಿನಗಳ ಹಿಂದೆ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಇನ್ನೊಂದು ವಾರದಲ್ಲಿ ಎರಡು ತಿಂಗಳ ವೇತನ ನೀಡುವಂತೆ ತಿಳಿಸಲಾಗಿತ್ತು. ಆದರೂ ಈವರೆಗೆ ಮಾಲೀಕರು ಸ್ಪಂದಿಸಿಲ್ಲ. ಆದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುವುದೆಂದರು.

ನಾಲ್ಕು ತಿಂಗಳ ವೇತನ ಬಾಕಿ ಇರುವುದಾಗಿ ಕಾರ್ಮಿಕರಿಂದ ದೂರು ಕೇಳಿಬಂದಿದ್ದು, ವಾರದೊಳಗೆ ಎರಡು ತಿಂಗಳ ವೇತನ ನೀಡಬೇಕು. ಬಾಕಿ ಎರಡು ತಿಂಗಳ ವೇತನವನ್ನು ಕೆಲವು ದಿನಗಳ ಕಾಲಾವಕಾಶ ಪಡೆದು ನೀಡುವಂತೆ ಕಾರ್ಖಾನೆಯ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯಂ ಅವರಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಕೆಲವು ಕಾರ್ಮಿಕರು, ತಿಂಗಳು ಪೂರ್ತಿ ದುಡಿದರೂ ಕನಿಷ್ಠ ವೇತನ ನೀಡುತ್ತಿದ್ದಾರೆ. ಎರಡು ವರ್ಷಗಳಿಂದ ಬೋನಸ್ ನೀಡಿಲ್ಲ. ನಿವೃತ್ತರಾದ ಕಾರ್ಮಿಕರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಎಂದು ಶಾಸಕರಿಗೆ ದೂರು ಸಲ್ಲಿಸಿದರು.

ಸಮಸ್ಯೆಗಳನ್ನು ಬಗೆಹರಿಸುವಂತೆ ಕಾರ್ಖಾನೆಯ ಮಾಲೀಕರಿಗೆ ಹಲವು ಬಾರಿ ದೂರವಾಣಿ ಮೂಲಕ ಕರೆ ಮಾಡಿದರೂ ಸ್ವೀಕರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಡಳಿತ ಮಂಡಳಿ ಪರವಾಗಿ ಮಾತನಾಡಲು ಆಗಮಿಸಿದ ಪ್ರಭಾಕರ್ ಎಂಬುವರನ್ನು ಕಾರ್ಮಿಕರು ತರಾಟೆಗೆ ತೆಗೆದುಕೊಂಡರು.

ಕಾರ್ಮಿಕ ಮುಖಂಡರಾದ ತಮ್ಮಯ್ಯ, ಕುಮಾರ್, ರಾಮೇಗೌಡ, ರವಿಕುಮಾರ್, ಬೆಟ್ಟದಪುರ ಠಾಣೆ ಪಿಎಸ್‌ಐ ಪುಟ್ಟರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net