ಹೀರೋ ಆಗುವ ಕನಸು ಕಂಡಿದ್ದ ಯುವಕನಿಗೆ ಶಾಕ್​ ಕೊಟ್ಟ ನಿರ್ದೇಶಕಿ! ಅಶ್ಲೀಲ ಚಿತ್ರದ ಸುಳಿಗೆ ಸಿಲುಕಿ ಪರದಾಟ

Photo of Director Lakshmi Deepta
Published on

ತಿರುವನಂತಪುರಂ: ಹೀರೋ ಮಾಡುವುದಾಗಿ ನಂಬಿಸಿ ಅಶ್ಲೀಲ ವೆಬ್​ ಸರಣಿಗೆ ಬಳಸಿಕೊಂಡರು ಎಂದು ಆರೋಪಿಸಿ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂ ನಿರ್ದೇಶಕಿ ಲಕ್ಷ್ಮೀ ದೀಪ್ತಾರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ ಮೂಲದ ಯುವಕ ನೀಡಿದ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಲಕ್ಷ್ಮೀ ದೀಪ್ತಾರನ್ನು ಬಂಧಿಸಿದ್ದಾರೆ. ಬಳಿಕ ನೆಡುಮಂಗಡ್​ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಆಕೆ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ವೆಂಗನೂರ್​ ಮೂಲದ ಯುವಕನಿಂದ ದೂರು ದಾಖಲಾಗಿದೆ. ವೆಬ್​ ಸರಣಿಯಲ್ಲಿ ನಾಯಕನ ಪಾತ್ರ ನೀಡುವುದಾಗಿ ಭರವಸೆ ನೀಡಿದರು. ನಂಬಿಕೆ ಬರುವಂತೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದರು. ಬಳಿಕ ನನ್ನನ್ನು ಒಪ್ಪಂದದಲ್ಲಿ ಸಿಲುಕಿಸಿ, ಬಲವಂತವಾಗಿ ಅಶ್ಲೀಲ ವೆಬ್​ ಸರಣಿಯಲ್ಲಿ ನಟಿಸುವಂತೆ ಮಾಡಿದರು. ಕಳೆದ ವರ್ಷ ಜೂನ್​ 5 ಮತ್ತು 7ರಂದು ಅರುವಿಕ್ಕರದ ಖಾಲಿ ಫ್ಲ್ಯಾಟ್​ನಲ್ಲಿ ಶೂಟಿಂಗ್​ ನಡೆಯಿತು. ವೆಬ್​ ಸರಣಿಯಿಂದ ಹೊರ ಬರುವ ಪ್ರಯತ್ನ ಮಾಡಿದರೆ ಒಪ್ಪಂದದ ಪತ್ರ ತೋರಿಸಿ ಬೆದರಿಸುತ್ತಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ವೆಬ್​ ಸರಣಿಯ ಟ್ರೈಲರ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಬಳಿಕ ತಿರುವನಂತಪುರಂನ ವಿಝಿಂಜಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದಾಗ ಯುವಕ ಹೈಕೋರ್ಟ್​ ಮೆಟ್ಟಿಲೇರಿದನು. ಆದರೆ, ಲಕ್ಷ್ಮೀ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆರೋಪಿಯನ್ನು ಪೊಲೀಸರ ಮುಂದೆ ಹಾಜರುಪಡಿಸಿದರೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net