ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ; ಉತ್ತರಕರ್ನಾಟಕ ದಾಳ ಉರುಳಿಸಿದ ಆಕಾಂಕ್ಷಿಗಳು !

IMG-20231117-WA0030
Published on

ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಪ್ರತಿಪಕ್ಷ ಆಯ್ಕೆಗೆ ಬಿಜೆಪಿಯಲ್ಲಿ ಕ್ಷಣಗಣನೆ ಶುರುವಾಗಿದೆ. ತೀವ್ರ ಪೈಪೋಟಿ ಏರ್ಪಟ್ಟಿರುವ ಕಾರಣ ಆಯ್ಕೆ ಅಂದುಕೊಂಡಷ್ಟು ಸುಲಭವಲ್ಲವೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಾತಿ ಸಮೀಕರಣದ ಲೆಕ್ಕಾಚಾರದ ನಡುವೆ ಉತ್ತರಕರ್ನಾಟಕಕ್ಕೆ ಆದ್ಯತೆ ನೀಡಬೇಕು ಎಂದು ಆಕಾಂಕ್ಷಿಗಳು ದಾಳ ಉರುಳಿಸಿದ್ದಾರೆ‌.

ಆರ್ ಟಿ ನಗರದ ಮನೆಯಲ್ಲಿ ಮಾಜಿ ಸಿಎಂ‌ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಭೇಟಿ ಮಾಡಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ಸಂಜೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನ ಉತ್ತರ ಕರ್ನಾಟಕ ಭಾಗದವರಿಗೆ ನೀಡಬೇಕೆಂಬ ಬೇಡಿಕೆ ಇಡುವ ಕುರಿತು ಪ್ರಸ್ತಾಪಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಉತ್ತರ ಕರ್ನಾಟಕದವರಿಗೆ ಪ್ರತಿಪಕ್ಷದ ಸ್ಥಾನ  ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ.  ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಲು ಸಭೆಯಲ್ಲಿ ಆಗ್ರಹಿಸುವ ಕುರಿತು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕನನ್ನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಮುಂದುವರಿಸುವ ಬಗ್ಗೆ ಬಹುತೇಕರ ಒಲವಿದೆ. ಹೀಗಾಗಿ ಕರಾವಳಿ ಪ್ರಾಂತ, ಅದೇ ಸಮುದಾಯಕ್ಕೆ ಸೇರಿದ ವಿ.ಸುನಿಲ್ ಕುಮಾರ್ ಹೆಸರು ವಿಧಾನಸಭೆ ನಾಯಕ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಕ್ಷೀಣಿಸಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕನ ಹುದ್ದೆಯ ಮೇಲೆ ಆರ್‌.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯತ್ನಾಳ್, ಬೆಲ್ಲದ್ ಮತ್ತೂ ಕೆಲವರು ಕಣ್ಣಿಟ್ಟಿದ್ದಾರೆ. ಸಂಘ, ಪರಿವಾರ, ಸೇವ ಹಿರಿತನ, ಜಾತಿ ಬಲ ಮುಂತಾದವುಗಳ ಆಧಾರದಲ್ಲಿ ತೆರೆಮರೆಯ ಲಾಬಿ ನಡೆಸಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ಮೇಲ್ಮನೆ ಪ್ರತಿಪಕ್ಷ ಅಭ್ಯರ್ಥಿ ಹೆಸರು ಅವಲಂಬಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕೇಂದ್ರ ವೀಕ್ಷಕರಾಗಿ ಆಗಮಿಸಿರುವ ನಿರ್ಮಲಾ ಸೀತಾರಾಮನ್, ದುಷ್ಯಂತಕುಮಾರ್ ಗೌತಮ್ ಅವರು ಡಾಲರ್ಸ್ ಕಾಲೊನಿಯ ದವಳಗಿರಿ ನಿವಾಸದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ನಂತರ ಆರ್.ಟಿ.ನಗರ ನಿವಾಸದಲ್ಲಿ ಬೊಮ್ಮಾಯಿಯವರಿಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿ ಔಪಚಾರಿಕ ಮಾತುಕತೆ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net