ಮೇಲ್ಮನೆ ಟಿಕೆಟ್​ಗೆ ಫೈಟ್: ಬಿಜೆಪಿಯಲ್ಲಿ 14 ಹೆಸರು ಫೈನಲ್, ಕೈಪಡೆಯಲ್ಲಿ ಅರ್ಜಿಗಳ ಸುನಾಮಿ

Vidhana Soudha vvani
Published on

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ವಿಶ್ಲೇಷಿಸಲಾಗುತ್ತಿರುವ ಮೇಲ್ಮನೆಯ 25 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಮೂರೂ ರಾಜಕೀಯ ಪಕ್ಷಗಳು ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಆಡಳಿತಾರೂಢ ಬಿಜೆಪಿ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಹೋರಾಟದ ನಡುವೆ ಜೆಡಿಎಸ್ ಸಹ ತನ್ನ ಅಸ್ತಿತ್ವ ಸಾಬೀತಿಗೆ ಪ್ರಯತ್ನ ನಡೆಸಲಿದೆ. ಬಿಜೆಪಿ, ಕಾಂಗ್ರೆಸ್​ನಲ್ಲಿ ಹಾಲಿ ಸದಸ್ಯರ ಪೈಕಿ ಬಹುತೇಕರಿಗೆ ಟಿಕೆಟ್ ಸಿಕ್ಕುವುದು ನಿಕ್ಕಿಯಾಗಿದ್ದರೆ, ಜೆಡಿಎಸ್​ನ ಹಾಲಿ ಸದಸ್ಯರಲ್ಲಿ ಎಷ್ಟು ಜನ ಪಕ್ಷದಲ್ಲೇ ಉಳಿಯಲಿದ್ದಾರೆ ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.

ಕಾಂಗ್ರೆಸ್, ಬಿಜೆಪಿ ತಲಾ 20 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಜೆಡಿಎಸ್ ಮಾತ್ರ ಎಲ್ಲ 25 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿಕೊಳ್ಳುತ್ತಿದೆ. ಪರಿಷತ್​ನಲ್ಲಿ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಬಿಜೆಪಿಯಲ್ಲಿ ಈಗಾಗಲೇ 14 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮವಾಗಿದ್ದರೆ, ಕಾಂಗ್ರೆಸ್​ನಲ್ಲಿ ಬಂದಿರುವ ಅರ್ಜಿಗಳ ಸಂಖ್ಯೆ ಅಭ್ಯರ್ಥಿಗಳ ಆಯ್ಕೆಗೆ ತಲೆನೋವು ತಂದಿದೆ. ಜೆಡಿಎಸ್​ನಲ್ಲಿ ಮಾತ್ರ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭವಾಗಿದೆ.

ಬಿಜೆಪಿ ಪಟ್ಟಿ ಅಂತಿಮ: ಬಿಜೆಪಿ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿರುವ ಬಿಜೆಪಿಯಲ್ಲಿ 14 ಉಮೇದುವಾರರ ಹೆಸರು ಬಹುತೇಕ ಅಂತಿಮವಾಗಿದೆ. ಉಳಿದ ಆಕಾಂಕ್ಷಿಗಳ ಮನವೊಲಿಸಿ ವಾತಾವರಣ ತಿಳಿಗೊಳಿಸುವ ಕಸರತ್ತು ಪಕ್ಷದಲ್ಲಿ ನಡೆದಿದೆ. ಮೇಲ್ಮನೆಯಲ್ಲಿ ಪಕ್ಷದ ಬಿಗಿ ಹಿಡಿತ ಸಾಧಿಸಲೆಂದು 15-16 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸಬೇಕು ಎಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹಾಲಿಗಳಲ್ಲಿ ಒಬ್ಬರಿಗೆ ಡೌಟು: ಹಾಲಿ ಸದಸ್ಯರ ಪೈಕಿ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ, ಉಪಸಭಾಪತಿ ಎಂ.ಕೆ. ಪ್ರಾಣೇಶ ಸೇರಿದಂತೆ ಐದು ಜನರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಕೊಡಗು ಕ್ಷೇತ್ರದ ಹಾಲಿ ಸದಸ್ಯ ಸುನೀಲ್ ಸುಬ್ರಮಣಿ ಭವಿಷ್ಯ ಡೋಲಾಯಮಾನವಾಗಿದ್ದು, ಸಂಸದ- ಶಾಸಕರ ಬೆಂಬಲ ಅವಲಂಬಿತವಾಗಿದೆ. ಮತ್ತೊಂದೆಡೆ ಸುಜಾ ಕುಶಾಲಪ್ಪ ಟಿಕೆಟ್​ಗೆ ತೀವ್ರ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಗ್ಗಜಗ್ಗಾಟ: ಜೆಡಿಎಸ್​ನ ಹಾಲಿ ಸದಸ್ಯರಾದ ಸಂದೇಶ ನಾಗರಾಜ್ ಹಾಗೂ ಸಿ.ಆರ್.ಮನೋಹರ್ ಬಿಜೆಪಿ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದು, ಇದೇ ವಿಚಾರವಾಗಿ ಹಗ್ಗ-ಜಗ್ಗಾಟ ನಡೆದಿದೆ. ಗೆಲ್ಲಬೇಕೆಂಬ ಕಾರಣಕ್ಕೆ ವಲಸಿಗರಿಗೆ ಮಣೆ ಹಾಕಲು ರಾಜ್ಯ ನಾಯಕರಿಗೆ ಇಷ್ಟವಿದೆ. ಆದರೆ ಪಕ್ಷ ಮೂಲದವರ ಆಕ್ಷೇಪ ಹಾಗೂ ಆಕಾಂಕ್ಷಿಗಳ ಒತ್ತಡ ಬಿಸಿತುಪ್ಪವಾಗಿದೆ ಎನ್ನಲಾಗುತ್ತಿದೆ. ಇನ್ನೂ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಸಂಸದ-ಶಾಸಕರು, ಜಿಲ್ಲಾ ಸಮಿತಿಗಳು ತಳೆದಿರುವ ಭಿನ್ನ ನಿಲುವು ಈ ಸಮಸ್ಯೆಯ ಮೂಲ. ಈ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಕ್ಕೆ ಸಮಿತಿಗಳನ್ನು ರಚಿಸಿದ್ದು, ಅಭಿಪ್ರಾಯ ಸಂಗ್ರಹಿಸಿದ ಬಳಿಕ ರಾಜ್ಯಾಧ್ಯಕ್ಷರು ಒಮ್ಮತ ಮೂಡಿಸಲು ಪ್ರಯತ್ನಿಸಲಿದ್ದಾರೆ.

ಸಂಭಾವ್ಯರಿವರು

  • ಮೈಸೂರು- ರಘು ಕೌಟಿಲ್ಯ/ ಸಂದೇಶ ನಾಗರಾಜ್
  • ಬೆಂಗಳೂರು ನಗರ- ನಂದೀಶರೆಡ್ಡಿ/ ಗೋಪಿನಾಥರೆಡ್ಡಿ
  • ಧಾರವಾಡ- ಪ್ರದೀಪ ಶೆಟ್ಟರ್
  • ಬೆಳಗಾವಿ- ಮಹಾಂತೇಶ ಕವಟಗಿಮಠ
  • ಕಲಬುರಗಿ- ಬಿ.ಜಿ. ಪಾಟೀಲ್
  • ಬಳ್ಳಾರಿ- ವೈ.ಎಂ. ಸತೀಶ್
  • ಶಿವಮೊಗ್ಗ- ಡಿ.ಎಸ್. ಅರುಣ್/ ಸಿದ್ದರಾಮಣ್ಣ
  • ಚಿತ್ರದುರ್ಗ- ಕೆ.ಎಸ್. ನವೀನ್
  • ಚಿಕ್ಕಮಗಳೂರು- ಎಂ.ಕೆ. ಪ್ರಾಣೇಶ್
  • ದಕ್ಷಿಣಕನ್ನಡ- ಕೋಟ ಶ್ರೀನಿವಾಸ ಪೂಜಾರಿ
  • ಉತ್ತರಕನ್ನಡ- ಉಳುವೇಕರ್/ ಗೋವಿಂದನಾಯ್ಕ
  • ವಿಜಯಪುರ- ಪಿ.ಎಚ್. ಪೂಜಾರ್
  • ತುಮಕೂರು- ಅಂಬಿಕಾ ಹುಲಿನಾಯ್ಕರ್/ ಸಿ.ಆರ್. ಮನೋಹರ್
  • ಕೊಡಗು- ಸುನೀಲ್ ಸುಬ್ರಮಣಿ/ ಸುಜಾ ಕುಶಾಲಪ್ಪ

ಚರ್ಚೆಯಲ್ಲಿರುವ ಕ್ಷೇತ್ರಗಳು: ಕೋಲಾರ, ಬೆಂಗಳೂರು ಗ್ರಾಮೀಣ, ಹಾಸನ, ಮಂಡ್ಯ, ರಾಯಚೂರು ಮತ್ತು ಬೀದರ್

ಇಂದು ದೆಹಲಿಗೆ ಬಿಜೆಪಿ ಪಟ್ಟಿ?: ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ 20 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಗುರುವಾರ ಫೈನಲ್ ಆಗಿ, ದೆಹಲಿಗೆ ರವಾನೆಯಾಗಲಿದೆ. ಬಿಡಿಸಲಾಗದ ಕಗ್ಗಂಟೆನಿಸಿದ ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳನ್ನು ಸೇರಿಸಿ ವರಿಷ್ಠರ ವಿವೇಚನೆಗೆ ಬಿಡುವ ಚಿಂತನೆ ನಡೆದಿದೆ. ನಾಮಪತ್ರ ಸಲ್ಲಿಕೆ ನ.16ರಿಂದ ಶುರುವಾಗಿದ್ದು ನ.23 ಕೊನೇ ದಿನವಾಗಿದೆ. ಅಭ್ಯರ್ಥಿಗಳ ಹೆಸರು ಪ್ರಕಟಣೆ ವಿಳಂಬವಾದರೆ ಮುಂದಿನ ಸಿದ್ಧತೆಗೆ ಸಮಸ್ಯೆಯಾಗುವ ಕಾರಣಕ್ಕೆ ಒಂದೆರಡು ದಿನಗಳಲ್ಲಿ ಅಧಿಕೃತ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ಟಿಕೆಟ್​ಗೆ ಬಲು ಬೇಡಿಕೆ

ಈಗಾಗಲೇ ಎರಡು ಸುತ್ತಿನ ಪೂರ್ವ ತಯಾರಿ ಸಭೆ ನಡೆಸಿರುವ ಕಾಂಗ್ರೆಸ್ ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿದೆ. ಪ್ರಸ್ತುತ ನಿವೃತ್ತರಾಗುತ್ತಿರುವ 25 ಸದಸ್ಯರ ಪೈಕಿ 14 ಮಂದಿ ಕಾಂಗ್ರೆಸಿಗರಿದ್ದರು. ಈ 14 ಸ್ಥಾನವನ್ನು ಪುನಃ ಗಳಿಸುವ ಜತೆಗೆ ಈ ಸಂಖ್ಯೆಯನ್ನು ಇನ್ನಷ್ಟು ವಿಸ್ತರಿಸುವ ಇರಾದೆ ನಾಯಕರದ್ದಾಗಿದೆ. ಸ್ಪರ್ಧಿಸಲು ಇರುವ 25 ಸ್ಥಾನಕ್ಕೆ 160 ಮಂದಿ ಬೇಡಿಕೆ ಇಟ್ಟಿದ್ದಾರೆ. 2-3 ದಿನಗಳಲ್ಲೇ ಅಭ್ಯರ್ಥಿ ಆಯ್ಕೆಗೆ ಕೈ ನಾಯಕರ ಸಭೆ ನಡೆಯಲಿದ್ದು, ಬಂಡಾಯ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಲು ಹಿರಿಯ ಮುಖಂಡರಿಗೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಬೀದರ್, ವಿಜಯಪುರ, ಉತ್ತರ ಕನ್ನಡ, ಧಾರವಾಡ (ಒಂದು ಸ್ಥಾನ) ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ (ಒಂದು ಸ್ಥಾನ), ಹಾಸನ, ಕೋಲಾರ, ಮೈಸೂರು (ಒಂದು ಸ್ಥಾನ) ಕಾಂಗ್ರೆಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಇವರ ಪೈಕಿ ಶ್ರೀನಿವಾಸ ಮಾನೆ ವಿಧಾನಸಭೆ ಪ್ರವೇಶಿಸಿರುವುದರಿಂದ ಆ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಹೂಡಬೇಕಿದೆ. ಹಾಗೆಯೇ 73 ವರ್ಷ ಹರೆಯದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರಿಗೆ ಪುನಃ ಅವಕಾಶ ಕಲ್ಪಿಸಬೇಕೋ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೋ ಎಂಬ ಗೊಂದಲದಲ್ಲಿ ಪಕ್ಷಇದೆ.

ಚಿತ್ರದುರ್ಗದಿಂದ ಕಣಕ್ಕಿಳಿಯಲ್ಲ ಎಂದು ರಘು ಆಚಾರ್ ಹೇಳಿದ್ದಾರೆ. ಹೀಗಾಗಿ ಮೂರು ಕಡೆ ಸೂಕ್ತ ಅಭ್ಯರ್ಥಿಯನ್ನು ಹುಡುಕಿಕೊಳ್ಳುವ ಜತೆಗೆ ಕಳೆದ ಬಾರಿ ಸೋತ ಕಡೆ ಗೆಲ್ಲುವ ಹುರಿಯಾಳು ಆಯ್ಕೆ ಮಾಡಿಕೊಳ್ಳಬೇಕಿದೆ. ಸ್ಥಳೀಯ ಸಂಸ್ಥೆಯಲ್ಲಿ ಸಾಮಾನ್ಯವಾಗಿ ಕಾಂಗ್ರೆಸ್ ಪ್ರಾಬಲ್ಯ ಇದ್ದೇ ಇತ್ತು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯದ ಕಾರಣ ಈ ಮತಗಳು ಲಭ್ಯವಾಗುವುದಿಲ್ಲ. ಇದು ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ. ಇದಲ್ಲದೇ ಪದವೀಧರ ಕ್ಷೇತ್ರಕ್ಕೆ ಮತದಾರರನ್ನು ನೋಂದಣಿ ಮಾಡಿಸಿದವರ ಪೈಕಿ ಹೆಚ್ಚು ಪ್ರಭಾವಿತರು ಯಾರು ಎಂದು ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗುತ್ತಿದೆ.

ಪರಿಷತ್ ಚುನಾವಣೆಗೆ ಕಾಂಗ್ರೆಸ್​ಗೆ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. 160 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಎರಡು ಸುತ್ತಿನಲ್ಲಿ ಸಭೆ ನಡೆಸಲಾಗಿದೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುವುದು ನಮ್ಮ ಗುರಿ, ಈ ಪ್ರಯತ್ನದಲ್ಲಿ ನಾವು ಯಶಸ್ಸು ಸಾಧಿಸುತ್ತೇವೆ.

| ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ

ಎಲ್ಲ ಸ್ಥಾನಗಳಿಗೂ ಜೆಡಿಎಸ್ ಸ್ಪರ್ಧೆ

ಮೇಲ್ಮನೆ ಹೋರಾಟದಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ. ತೆರವಾಗುವ ಸ್ಥಾನಗಳಲ್ಲಿ ಜೆಡಿಎಸ್​ನ ಐವರು ಸದಸ್ಯರಿದ್ದಾರೆ. ಐದು ಸ್ಥಾನ ಖಾಲಿ: ಜೆಡಿಎಸ್​ನ ಎನ್.ಅಪ್ಪಾಜಿಗೌಡ, ಸಿ.ಆರ್.ಮನೋಹರ್, ಕಾಂತರಾಜು, ಸುನಿಲ್​ಗೌಡ ಪಾಟೀಲ್ ಮತ್ತು ಸಂದೇಶ ನಾಗರಾಜ್ ಅವರ ಅವಧಿ ಜನವರಿ 5, 2022ಕ್ಕೆ ಪೂರ್ಣಗೊಳ್ಳಲಿದೆ. 25 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಟಿಕೆಟ್​ಗೆ ಭರ್ಜರಿ ಪೈಪೋಟಿ ಶುರುವಾಗಿದೆ. ಈಗಾಗಲೇ ಅನೇಕರು ಟಿಕೆಟ್​ಗಾಗಿ ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದಿದ್ದಾರೆ. ಇನ್ನು ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳ ಹುಡುಕಾಟಕ್ಕೆ ವರಿಷ್ಠರು ತಲೆ ಕೆಡಿಸಿಕೊಳ್ಳಬೇಕಿದೆ.

ಬಿಜೆಪಿ ಪ್ರಬಲ ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ಸದಸ್ಯರಿಗೆ ಗಾಳ ಹಾಕಿದೆ. ಈ ಗಾಳಕ್ಕೆ ಈಗಾಗಲೇ ಸಂದೇಶ್ ನಾಗರಾಜ್, ಸಿ.ಆರ್. ಮನೋಹರ್ ಸಿಲುಕಿದ್ದಾರೆ ಎನ್ನಲಾಗಿದೆ. ಇವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಇಚ್ಛೆ ವರಿಷ್ಠರಿಗೆ ಇದ್ದಂತಿಲ್ಲ. ಹೋಗುವವರು ಹೋಗಲಿ ಎಂಬ ಬಿಗಿ ನಿಲುವಿನಲ್ಲಿ ಕುಮಾರಸ್ವಾಮಿ ಇದ್ದಾರೆ. ಹೆಚ್ಚು ಸ್ಥಾನ ಗೆಲ್ಲಲು ಆಗದಿದ್ದರೂ ಕಿಂಗ್ ಮೇಕರ್ ಆಗಬೇಕೆಂಬ ಆಲೋಚನೆ ಜೆಡಿಎಸ್​ನದ್ದು. ಹಾಗಾಗಿ ನಿರ್ಣಾಯಕ ಸಂಖ್ಯಾಬಲಕ್ಕೆ ಮಾತ್ರ ಜೆಡಿಎಸ್ ಹೋರಾಟ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.

ಮನವೊಲಿಕೆ ಕಷ್ಟ: ಬಿ.ಎಂ.ಎಲ್. ಕಾಂತರಾಜ್ ವಿಧಾನಸಭೆ ಟಿಕೆಟ್​ಗೆ ಉತ್ಸುಕರಾಗಿರುವುದರಿಂದ, ಅವರ ಮನವೊಲಿಸಿ ಕಣಕ್ಕಿಳಿಸುವುದು ಕೂಡ ಕಷ್ಟ ಎಂಬ ಮಾತು ಜೆಡಿಎಸ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಮೇಲ್ಮನೆಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು. ಈಗಾಗಲೇ ಆಕಾಂಕ್ಷಿಗಳ ಪಟ್ಟಿ ತಮ್ಮ ಬಳಿ ಇದ್ದು, ಆಯಾ ಭಾಗದ ನಾಯಕರ ಜತೆ ರ್ಚಚಿಸಿ ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ಎಲ್ಲ 25 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ.

| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಕವಟಗಿಮಠ ಆಯ್ಕೆ ಖಚಿತ: ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಬಾರಿಯಂತೆಯೇ ಬಿಜೆಪಿಯಿಂದ ಓರ್ವ ಸದಸ್ಯನನ್ನು ಆಯ್ಕೆ ಮಾಡಲು ಚಿಂತನೆ ನಡೆದಿದ್ದು, ಈಗಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರನ್ನೇ ಮರುಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net