ಸಾರಿಗೆ ನಿಗಮಗಳ ಮೃತ ಸಿಬ್ಬಂದಿಗೆ ಪರಿಹಾರ  ಬಿಡುಗಡೆ ಮಾಡಿಲ್ಲ : ಹೈಕೋರ್ಟ್‌ಗೆ ಪಿಐಎಲ್

highcourt
Published on

ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಕುಟುಂಬದ ಸದಸ್ಯರಿಗೆ ತಲಾ ₹ 30 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದುವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜ.27 ಕ್ಕೆ ಮುಂದೂಡಿದೆ.

ದಾವಣಗೆರೆಯ ತಾಹೀರ್ ಹುಸೈನ್ ಮತ್ತು ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಪಿ.ಉಸ್ಮಾನ್ ವಾದ ಮಂಡಿಸಿ, ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ಇದುವರೆಗೂ ₹ 30 ಲಕ್ಷ ಪರಿಹಾರವನ್ನು ನೀಡಿಲ್ಲ ಎಂದರು.

ವಾದ ಆಲಿಸಿದ ಪೀಠವು ಜ.27ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆ ಮುಂದೂಡಿತು.

ಕೋವಿಡ್‌ನಿಂದ ಸಾರಿಗೆ ನೌಕರರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ತಲಾ ₹ 30 ಲಕ್ಷ ಪರಿಹಾರ ಕಲ್ಪಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ 2021ರ ಫೆ.10ರಂದು ಸುತ್ತೋಲೆ ಹೊರಡಿಸಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ 2020ರ ಮಾರ್ಚ್‌ನಿಂದ 2021ರ ಜೂನ್‌ವರಗೆ ಕೋವಿಡ್‌ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 351 ನೌಕರರು ಮೃತಪಟ್ಟಿದ್ದಾರೆ ಎಂದು ವಿವರಿಸಲಾಗಿದೆ.

2021ರ ಫೆ.10ರಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆ ಜಾರಿಗೊಳಿಸಬೇಕು. ಸಾರಿಗೆ ನಿಗಮಗಳ ನೌಕರರು ಕೋವಿಡ್‌ನಿಂದ ಮೃತಪಟ್ಟ ಪ್ರಕರಣಗಳ ಸಂಬಂಧ ಮೃತ ನೌಕರರ ಕುಟುಂಬ ಸದಸ್ಯರು ಅಥವಾ ಅವಲಂಬಿತರಿಗೆ ಯಾವುದೇ ವಿಳಂಬವಿಲ್ಲದೆ ಕೂಡಲೇ ₹ 30 ಲಕ್ಷ ಪರಿಹಾರ ಪಾವತಿಸುವುದನ್ನು ಖಾತರಿಪಡಿಸಬೇಕು. ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಗತ್ಯ ಹಣಕಾಸು ಬಿಡುಗಡೆ ಮಾಡಲು ಸರ್ಕಾರ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net