

Employees: ಒಂದು ಸಂಸ್ಥೆ ಅಂದಮೇಲೆ ಅಲ್ಲಿ ಹಲವಾರು ಷರತ್ತುಗಳಿರುತ್ತವೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕು, ಅನಗತ್ಯ ರಜೆ ಪಡೆಯಬಾರದು. ಸಂಸ್ಥೆಯಲ್ಲಿ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು, ತಮ್ಮ ಕಂಪನಿ ಕೆಲಸಗಳನ್ನು ಹೊರತುಪಡಿಸಿ ಇನ್ನಾವುದೇ ಹೊರಗಿನ ಕೆಲಸಗಳನ್ನು ಮಾಡುವಂತಿಲ್ಲ ಎಂಬ ಹತ್ತು ಹಲವು ಷರತ್ತುಗಳನ್ನು ತಮ್ಮ ಉದ್ಯೋಗಿಗಳಿಗೆ ಆಯಾ ಸಂಸ್ಥೆಗಳು ವಿಧಿಸುತ್ತವೆ. ಇವುಗಳನ್ನು ಉದ್ಯೋಗಿಗಳು ಕೂಡ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಕಸ್ಮಾತ್ ಪಾಲಿಸಲು ವಿಫಲರಾದರೆ, ನೇರ ಮನೆಗೆ ಹೋಗಲು ಸಿದ್ಧರಾಗಿರಬೇಕು.
ಅಸಲಿಗೆ ಈ ಮೇಲ್ಕಂಡ ಷರತ್ತುಗಳನ್ನು ಪಾಲಿಸಬಹುದು. ಆದರೆ, ಇಲ್ಲೊಂದು ದೇಶದ ಕಂಪನಿ, ತನ್ನೆಲ್ಲಾ ಉದ್ಯೋಗಿಗಳಿಗೆ ವಿಧಿಸುವ ಷರತ್ತು ಬಹಳ ವಿಚಿತ್ರ ಎನ್ನುವಂತೆ ಮಾಡಿದೆ. ಈ ಕಂಡಿಷನ್ನ ಕೇಳಿದ ಮೇಲೆ ಪ್ರಪಂಚದಲ್ಲಿ ಹೀಗೂ ಉಂಟಾ? ಎಂಬ ಪ್ರಶ್ನೆ ತಲೆಯಲ್ಲಿ ಓಡುವುದಂತೂ ಖಚಿತ. ಅಷ್ಟಕ್ಕೂ ಚೀನಾ ಮೂಲದ ಈ ಸಂಸ್ಥೆ ತನ್ನ ಉದ್ಯೋಗಿಗಳಿಗೆ ವಿಧಿಸುವ ಷರತ್ತು ಏನು? ಹೀಗೆ ಹೇಳಲು ಕಾರಣವೇನು? ಎಂಬ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಹೀಗಿದೆ ನೋಡಿ.
ಚೀನಾದ ಶಾಂಡೊಂಗ್ ನಗರದಲ್ಲಿರುವ ಕಂಪನಿಯೊಂದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ತನ್ನ ಸಂಸ್ಥೆಯ ಅವಿವಾಹಿತ ಮತ್ತು ವಿಚ್ಛೇದಿತ ಉದ್ಯೋಗಿಗಳು ಮದುವೆಯಾಗದೆ ಹಾಗೆಯೇ ಉಳಿಯುವಂತಿಲ್ಲ. ಕೆಲಸದಿಂದ ಕಿತ್ತುಬಿಸಾಡುವ ಮುನ್ನ ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ನಂತರದಲ್ಲಿ ಮಕ್ಕಳು ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಉದ್ಯೋಗದಿಂದ ತೆಗೆದುಹಾಕುವುದಾಗಿ ಬೆದರಿಕೆಯೊಡ್ಡಿದೆ. ಈ ಸಂಗತಿ ಸದ್ಯ ಅನೇಕರ ಗಮನ ಸೆಳೆದಿದ್ದು, ವಿಶೇಷವಾಗಿ ಸರ್ಕಾರಿ ಅಧಿಕಾರಿಗಳ ಹುಬ್ಬೇರಿಸಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಶಾಂಡೊಂಗ್ ಶುಂಟಿಯನ್ ಕೆಮಿಕಲ್ ಗ್ರೂಪ್ ಕಂ. ಲಿಮಿಟೆಡ್ ಕಂಪನಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ತನ್ನ 1,200ಕ್ಕೂ ಅಧಿಕ ಉದ್ಯೋಗಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಸಂಸ್ಥೆ ಕಳುಹಿಸಿರುವ ನೋಟಿಸ್‌ನಲ್ಲಿ, 28ರಿಂದ 58 ವರ್ಷ ವಯಸ್ಸಿನ ಉದ್ಯೋಗಿಗಳ ಪೈಕಿ ಒಂಟಿ ಜೀವನ ನಡೆಸುತ್ತಿರುವ ಡಿವೋರ್ಸ್ ಪಡೆದ ನೌಕರರು, ಈ ವರ್ಷದ ಸೆಪ್ಟೆಂಬರ್ ಅಂತ್ಯದೊಳಗೆ ಮದುವೆಯಾಗಿ ನೆಲೆಸಬೇಕು. ಇನ್ನು ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಮದುವೆಯಾಗದವರು, ತಾವೇಕೆ ಆಗುವುದಿಲ್ಲ? ಅದರ ಹಿಂದಿರುವ ಕಾರಣವೇನು ಎಂಬುದನ್ನು ತಿಳಿಸಬೇಕು. ಇದನ್ನೂ ಮೀರಿ ಆತ್ಮವಿಮರ್ಶೆ ಪತ್ರವನ್ನೂ ಬರೆಯಬಹುದು. ಜೂನ್ ಅಂತ್ಯದೊಳಗೆ ಮದುವೆಯಾಗದಿದ್ದರೆ, ಕಂಪನಿಯು ಅಂಥವರನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ತಿಳಿಸಿದೆ.
ಇನ್ನು ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸಂಸ್ಥೆಯ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಉದ್ಯೋಗಿಗಳಿಗೆ ಇಂತಹ ನಿಯಮಗಳನ್ನು ಹೇರುವ ಮೂಲಕ ಕಂಪನಿಯು ಹಲವಾರು ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಕಮೆಂಟ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, 'ಈ ಹುಚ್ಚು ಕಂಪನಿಯು ತನ್ನ ವ್ಯವಹಾರವನ್ನು ನೋಡಿಕೊಳ್ಳಬೇಕು. ಸುಖಾಸುಮ್ಮನೆ ಉದ್ಯೋಗಿಗಳ ವೈಯಕ್ತಿಕ ಜೀವನಕ್ಕೆ ತಲೆಹಾಕಬಾರದು. ಅದರಿಂದ ದೂರವಿರಬೇಕು' ಎಂದು ಖಾರವಾಗಿ ನುಡಿದಿದ್ದಾರೆ.
ಈ ವಿಚಾರಕ್ಕೆ ಉದ್ಯೋಗಿಗಳು ಸೇರಿದಂತೆ ನೆಟ್ಟಿಗರಿಂದ ತೀವ್ರ ವಿರೋಧ, ಟೀಕಗೆಳು ಹರಿದುಬಂದ ಬೆನ್ನಲ್ಲೇ ಸಂಸ್ಥೆ ಜಾರಿಗೊಳಿಸಿದ ನೋಟಿಸ್ ಅನ್ನು ಹಿಂಪಡೆದಿದೆ. ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಬ್ಯೂರೋ ಕಂಪನಿಯು ನೋಟಿಸ್ ಅನ್ನು ರದ್ದುಗೊಳಿಸಿ, ತಿದ್ದುಪಡಿ ಆದೇಶವನ್ನು ಹೊರಡಿಸಿದೆ. ನೋಟಿಸ್ ಕಾರ್ಮಿಕ ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).