

ಬೆಂಗಳೂರು: ಬಡತನದ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವ ಕುಟುಂಬಗಳಿಗೆ ಪಡಿತರ ಚೀಟಿ ವಿತರಣಾ ಮಾನದಂಡ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿಯೂ ಆದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಬಿಪಿಎಲ್ ಪಡಿತರ ಚೀಟಿ ದುರ್ಬಳಕೆಗೆ ಕಡಿವಾಣ, ಸರ್ಕಾರದ ಬೊಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸುವುದು, ಅರ್ಹರಿಗೆ ಈ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಉಪಕ್ರಮವಹಿಸಲಾಗಿದೆ.
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಹೊಂದಿರುವ ಮಾಹಿತಿ, ದೂರುಗಳು ಗಮನಕ್ಕೆ ಬಂದಿವೆ. ಉಪಸಮಿತಿಯು ಬಿಪಿಎಲ್ ಪಡಿತರ ಚೀಟಿ ಮಾನದಂಡಗಳ ಜತೆಗೆ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಪರಿಶೀಲಿಸಿ ಸಲಹೆಗಳನ್ನು ಪ್ರಸ್ತಾಪಿಸಲಿದೆ ಎಂದು ತಿಳಿಸಿದರು.
ಆಡಳಿತದಲ್ಲಿ ಸುಧಾರಣೆ, ಸರಳೀಕರಣ, ನಾಗರಿಕ ಸೇವೆಗಳ ತ್ವರಿತ ವಿಲೇವಾರಿ ದೃಷ್ಟಿಯಿಂದ ಉತ್ತರಕನ್ನಡ, ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದೆ. ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಮುಂಚೂಣಿ ಇಲಾಖೆಗಳ ತಳಹಂತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ, ಕೆಲಸದ ಹೊರೆ ಹೆಚ್ಚಿರುವ ಜಿಲ್ಲೆಗಳಿಗೆ ಮರು ನಿಯೋಜನೆ, ಅನಗತ್ಯವೆಂದು ಪರಿಗಣಿತ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಾಗಿ ಪರಿವರ್ತಿಸಲು ಸಲಹೆ ನೀಡಲಾಗಿದೆ.
ಮುಖ್ಯಮಂತ್ರಿ, ಸಚಿವರು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆಗೆ ಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಗಿದೆ. ಸಣ್ಣ, ಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು, ದಕ್ಷತೆ ಹೆಚ್ಚಿಸಲು 19 ಇಲಾಖೆಗಳಿಗೆ ಸಂಬಂಧಿಸಿದ 2871 ಶಿಾರಸುಗಳನ್ನು ಮಾಡಲಾಗಿದೆ.
ಈ ಪೈಕಿ 853 ಶಿಫಾರಸುಗಳನ್ನು ಸರ್ಕಾರ ಒಪ್ಪಿ ಅನುಷ್ಠಾನಕ್ಕೆ ತಂದಿದೆ. 592 ಶಿಫಾರಸುಗಳನ್ನು ಒಂದು ತಿಂಗಳೊಳಗೆ ಅನುಷ್ಠಾನಕ್ಕೆ ತರಲು ನಿರ್ದೇಶಿಸಲಾಗಿದೆ. ಸರ್ಕಾರದಮಟ್ಟದಲ್ಲಿ 245, ಇಲಾಖೆಮಟ್ಟದಲ್ಲಿ ಬಾಕಿಯಿರುವ 1181 ಶಿಾರಸುಗಳ ಬಗ್ಗೆ ಕ್ರಮಕ್ಕೆ ತಿಳಿಸಲಾಗಿದೆ.
ಆಯೋಗದ ಪರಿಶೀಲನೆಗೆ 20 ಇಲಾಖೆಗಳ 2168 ಶಿಫಾರಸುಗಳು ಬಾಕಿಯಿವೆ. ಇದರಲ್ಲಿ 12 ಅನುಷ್ಠಾನಕ್ಕೆ ಬಂದಿದ್ದರೆ, 193 ಅನುಷ್ಠಾನ ಹಂತದಲ್ಲಿವೆ. 392 ಸರ್ಕಾರ, 1771 ಶಿಫಾರಸುಗಳು ಇಲಾಖೆಮಟ್ಟದಲ್ಲಿ ಉಳಿದಿರುವುದು ತಮಗೆ ಸಮಾಧಾನ ತಂದಿಲ್ಲವೆಂದು ಆರ್.ವಿ.ದೇಶಪಾಂಡೆ ಹೇಳಿದರು.
ನಕಲಿ ದಾಖಲೆಗಳ ಆಧಾರದಲ್ಲಿ ಆಸ್ತಿ ದಸ್ತಾವೇಜು ನೋಂದಣಿ ರದ್ದು, ಆನ್‌ಲೈನ್ ಸೇವೆಗಳಿಗೆ ಒತ್ತು ಸೇರಿ ಪ್ರಮುಖ ಶಿಾರಸುಗಳು ಅನುಷ್ಠಾನಕ್ಕೆ ತಂದಿದ್ದರಲ್ಲಿ ಸೇರಿವೆ. ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಬಲ ತುಂಬಲು ಜಿಲ್ಲಾ, ತಾಲೂಕು ಪಂಚಾಯಿತಿಗಳು, ಪಾಲಿಕೆಗಳ ಚುನಾವಣೆ ಸಕಾಲಕ್ಕೆ ನೆರವೇರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಆಯೋಗ ಶಿಾರಸು ಮಾಡಿದ ಎಲ್ಲ ಶಿಫಾರಸುಗಳನ್ನು ಸರ್ಕಾರ ಒಪ್ಪಿ, ಜಾರಿಗೊಳಿಸಬೇಕು ಎಂದೇನಿಲ್ಲ. ಸೂಕ್ತವಾದವುಗಳನ್ನು ಆದ್ಯತೆ ಮೇಲೆ ಅನುಷ್ಠಾನಕ್ಕೆ ತಂದ ನಿದರ್ಶನಗಳಿವೆ. ಮುಂದಿನ ದಿನಗಳಲ್ಲಿ ಆಯೋಗವು ವಿಭಾಗ, ಜಿಲ್ಲಾ, ಉಪವಿಭಾಗಮಟ್ಟದ ಸಭೆಗಳನ್ನು ನಡೆಸಲು ಯೋಜಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿರುವ 160 ಸಾರ್ವಜನಿಕ ನಿಗಮ-ಮಂಡಳಿಗಳ ಪೈಕಿ 107 ನಷ್ಟದಲ್ಲಿವೆ. ಇವುಗಳಲ್ಲಿ ಸುಧಾರಣೆ ಕ್ರಮಗಳಿಂದ ಕೆಲವನ್ನು ಪುನಶ್ಚೇತನ ಸಾಧ್ಯವಿದೆ. ಬಾಕಿ ಉಳಿದ ನಿಗಮ-ಮಂಡಳಿಗಳ ವಿಲೀನದ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು. ಆಯೋಗದ ಸಲಹೆಗಾರ ಎನ್.ಎಸ್.ಪ್ರಸನ್ನಕುಮಾರ್ ಇದ್ದರು.