

ಬೆಂಗಳೂರು: ಕಿಯೋನಿಕ್ಸ್ ಸಂಸ್ಥೆಗೆ ಸಂಬಂಧಿಸಿದ ಸರಬರಾಜುದಾರರು ಹಾಗೂ ಪಾಲುದಾರರಿಗೆ ಹಣ ಪಾವತಿ ವಿಳಂಬ, ಏನಾದರೂ ಸಮಸ್ಯೆಯಾಗಿದ್ದರೆ ಹಿಂದಿನ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಬಿಜೆಪಿಯತ್ತ ಬೊಟ್ಟು ಮಾಡಿದ್ದಾರೆ.
ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿಯೋನಿಕ್ಸ್ ವೆಂಡರ್ಸ್‌ಗಳು ಪತ್ರ ಬರೆದಿರುವ ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹಾಗೂ ಕಿಯೋನಿಕ್ಸ್ ಸಂಸ್ಥೆ ಅಧ್ಯಕ್ಷ ಶರತ್ ಬಚ್ಚೇಗೌಡ ಬುಧವಾರ ಜಂಟಿ ಹೇಳಿಕೆ ನೀಡಿದ್ದಾರೆ. ಪೂರಕವಾಗಿ ಅಕೌಂಟಂಟ್ ಜನರಲ್ ಅವರ 2018-19 ರಿಂದ 2022-23ರವರೆಗಿನ ಆಡಿಟ್ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಕಿಯೋನಿಕ್ಸ್ ಸಂಸ್ಥೆ ಸಂಗ್ರಹಣೆಯಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮವಹಿಸಿದರೆ ಬಿಜೆಪಿಯವರು ಎಂದು ‘ಕಿರುಕುಳ’ ಎಂದು ಹೆಸರಿಸಿದ್ದಾರೆ. ಪ್ರಾಮಾಣಿಕ, ಪಾರದರ್ಶಕ ಕೆಲಸಗಳು ಭ್ರಷ್ಟರಿಗೆ ಸಹಿಸಲಾಗದು ಎಂದು ವ್ಯಂಗ್ಯವಾಡಿದ್ದಾರೆ.
ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದ್ದರೆ, ಬಿಲ್ ಬಾಕಿ ಉಳಿದಿದ್ದರೆ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಹೊರತು ನಾವಲ್ಲ. ಜನರ ಬೆವರಿನ ನೂರಾರು ಕೋಟಿ ರೂ. ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕಯಿಡುವುದು ನಮ್ಮ ಸರ್ಕಾರದ ಹೊಣೆ, ಕರ್ತವ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಡಿಟ್ ವರದಿ ಅವಲೋಕನದ ಪ್ರಕಾರ ಭಾರಿ ಮೌಲ್ಯದ ಉಲ್ಲಂಘನೆಗಳಾಗಿವೆ. 45 ಸಂಗ್ರಹಣೆಗಳ ಪ್ರಾಯೋಗಿಕ ತನಿಖೆಯಲ್ಲಿ 455 ಕೋಟಿ ರೂ. ಮೊತ್ತದ ಉಲ್ಲಂಘನೆ ಪತ್ತೆ ಹಚ್ಚಿದ್ದು, ಸಮಗ್ರ ತನಿಖೆಗೆ ಒಳಪಡಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಕಂಪನಿಯು ವಿವಿಧ ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳಿಗೆ ಒದಗಿಸಿದ ಹೆಚ್ಚಿನ ಸರಕುಗಳು, ಸೇವೆಗಳಿಗೆ ಮೂರನೇ ವ್ಯಕ್ತಿಯ ತಪಾಸಣೆ ನಡೆಸಿಲ್ಲ. ನಕಲಿ ಮೂರನೇ ವ್ಯಕ್ತಿಗಳ ಬಳಕೆ, ತಪ್ಪಾದ ಮೂಲ ದರ ಅಳವಡಿಕೆ, ಒಪ್ಪಂದದ ಷರತ್ತುಗಳ ಉಲ್ಲಂಘನೆ, ಪ್ರಮಾಣಿತ ಟೆಂಡರ್ ದಾಖಲೆಗಳನ್ನು ಅಳವಡಿಸಿಕೊಳ್ಳದಿರುವುದು ಇತ್ಯಾದಿ ಲೋಪಗಳಾಗಿವೆ.
ಕಿಯೋನಿಕ್ಸ್ ಸಂಸ್ಥೆಗೆ ಅನ್ವಯವಾಗುವ ಎಲ್ಲ ಕಾನೂನು, ನಿಯಮಗಳು ಅನುಸರಣೆ, ಹೊಣೆಗಾರಿಕೆ ಎತ್ತಿಹಿಡಿಯುವುದು ನಮ್ಮ ಆದ್ಯತೆಯಾಗಿದೆ. ಸಂಸ್ಥೆಗೆ ಸರಬರಾಜುದಾರರು, ಪಾಲುದಾರರು ತಮಗೆ ಪಾವತಿಯಾಗಬೇಕಾದ ಬಾಕಿ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಮನವಿಯನ್ನು ಆದ್ಯತೆಯ ಮೇಲೆ ಲೆಕ್ಕಪರಿಶೋಧನೆ ಅವಲೋಕನ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಹಣಕಾಸು ದುರುಪಯೋಗದ ಅಂಶಗಳು ಮೇಲ್ನೋಟಕ್ಕೆ ದೃಢಪಟ್ಟಿರುವಾಗ ಯಾವುದೇ ತನಿಖೆಗೆ ಒಳಪಡಿಸದೆ ಪಾವತಿಸಬೇಕು ಎಂಬ ಬೇಡಿಕೆಯು ನಿಯಮಬಾಹಿರವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆಡಿಟ್ ಪರಿಶೀಲನೆಯಲ್ಲಿ ಆಕ್ಷೇಪಣೆ ಕಂಡುಬಂದಿರುವುದರಿಂದ ಸಮಗ್ರ ತನಿಖೆಯಾಗಬೇಕಿದೆ. ಕಿಯೋನಿಕ್ಸ್ ವೆಂಡರ್‌ಗಳಿಗೆ ತೊಂದರೆಯಾಗಿದ್ದಕ್ಕೆ ಬಿಜೆಪಿಯ ಭ್ರಷ್ಟಾಚಾರವೇ ಕಾರಣ. - ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ. ಆಡಿಟರ್ ಜನರಲ್ ಅವರ ಮೇಲ್ನೋಟದ ಲೆಕ್ಕಪರಿಶೋಧನೆಯಲ್ಲಿ 45 ಆಕ್ಷೇಪಣೆಗಳು ಸೇರಿ 455 ಕೋಟಿ ರೂ. ಮೌಲ್ಯದ ಉಲ್ಲಘನೆಗಳನ್ನು ಉಲ್ಲೇಖಿಸಿದ್ದಾರೆ. ಇವುಗಳ ಸಮಗ್ರ ತನಿಖೆಯಾಗಬೇಕು. ಜನರ ಹಣ ಮನಬಂದಂತೆ ಪೋಲು ಮಾಡುವುದು ಅಸಾಧ್ಯ. -ಶರತ್ ಬಚ್ಚೇಗೌಡ, ಅಧ್ಯಕ್ಷ, ಕಿಯೋನಿಕ್ಸ್.