

ಆಲ್ದೂರು:: ಸತತ ಮಳೆಯಿಂದಾಗಿ ಹೊಸಳ್ಳಿ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು 6 ಕುಟುಂಬಗಳನ್ನು ಅರೆನೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಅರೆನೂರು ಗ್ರಾಮದ ಪ್ರಾಥಮಿಕ ಪಾಠಶಾಲೆ ಮಕ್ಕಳಿಲ್ಲದೆ ಮುಚ್ಚಿದ್ದರಿಂದ ಈ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಹೊಸಳ್ಳ ಗ್ರಾಮದ 6 ಕುಟುಂಬಗಳ ಒಟ್ಟು 15 ಜನ ಇದರಲ್ಲಿ ಆಶ್ರಯಪಡೆದಿದ್ದಾರೆ. ಇದರಲ್ಲಿ ಮೂವರು ಸಣ್ಣ ಮಕ್ಕಳಿದ್ದಾರೆ ಎಂದರು.
ಸಂತ್ರಸ್ತ ಕುಟುಂಬಗಳು ಸಚಿವರ ಜತೆ ಮಾತನಾಡಿ, ಹಿಂದೆ ವಾಸವಿದ್ದ ಜಾಗದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ನಾವು ಜೀವ ಭಯದಲ್ಲೇ ಬದುಕುತ್ತಿದ್ದೇವೆ. ದಿನದಿಂದ ದಿನಕ್ಕೆ ಮಳೆ, ಗಾಳಿ ಹೆಚ್ಚಾಗುತ್ತಿದ್ದು ನಾವು ಅಲ್ಲಿ ವಾಸವಿರಲು ಸಾಧ್ಯವಿಲ್ಲ. ನಮಗೆ ಪರ್ಯಾಯ ನಿವೇಶನ ನೀಡಬೇಕು ಎಂದು ಸಚಿವರ ಜತೆ ಅಳಲು ತೋಡಿಕೊಂಡರು.
ಸಚಿವ ಜಾರ್ಜ್ ಮಾತನಾಡಿ, ಸಂತ್ರಸ್ತ ಕುಟುಂಬಗಳು ಭಯಪಡುವ ಅವಶ್ಯಕತೆ ಇಲ್ಲ. ನಿಮಗೆ ನಿವೇಶನ ಒದಗಿಸಲು ಬದ್ಧನಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ನಿಮಗೆ ಈ ಕಾಳಜಿ ಕೇಂದ್ರದಲ್ಲಿ ವಾಸವಿರಲು ಕಷ್ಟವಾದರೆ ಆಲ್ದೂರು, ಚಿಕ್ಕಮಗಳೂರಿನ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ತಕ್ಷಣ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಸುಮಂತ್ ಮಾತನಾಡಿ, ಅರೆನೂರು ಗ್ರಾಮದ ಸರ್ವೆ ನಂ.32ರಲ್ಲಿ 2.5 ಎಕರೆ ಜಾಗವನ್ನು ನಾವು ಪರ್ಯಾಯವಾಗಿ ಗುರುತು ಮಾಡಿದ್ದೇವೆ. ಆದರೆ ಆ ಜಾಗ ಡೀಮ್ಡ್ ಾರೇಸ್ಟ್‌ಗೆ ಸೇರಿದ್ದು ಅರಣ್ಯ ಇಲಾಖೆಯ ಅನುಮತಿಗೆ ಕಳುಹಿಸಲಾಗಿದೆ. ಅನುಮತಿ ನೀಡಿದ ತಕ್ಷಣ ನಿವೇಶನವನ್ನಾಗಿ ಬದಲಾಯಿಸಿ ಒಂದು ಕುಟುಂಬಕ್ಕೆ 4 ಗುಂಟೆಯಂತೆ 6 ಕುಟುಂಬಗಳಿಗೆ ನಿವೇಶನ ನೀಡಲಾಗುವುದು ಎಂದರು.
ಎರಡು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ದನ ಮೇಯಿಸುವ ಸಂದರ್ಭದಲ್ಲಿ ಹರಿಯುವ ನೀರಿಗೆ ಕಾಲುಜಾರಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿ ಬಸರವಳ್ಳಿ ಗ್ರಾಪಂ ವ್ಯಾಪ್ತಿಯ ಕುಮಾರ್ (33) ಎಂಬುವರ ಪತ್ನಿ ರೇಣುಕಾ ಅವರಿಗೆ 5 ಲಕ್ಷ ರೂ. ಪರಿಹಾರದ ಪ್ರತಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು. ಕುಮಾರ್ ಅವರಿಗೆ ಮೂರು ವರ್ಷದ ಮಗುವಿದೆ.
ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಮ್ ಅಮಟೆ, ತಹಸೀಲ್ದಾರ್ ಸುಮಂತ್, ಪಂಚಾಯಿತಿ ನೋಡಲ್ ಅಧಿಕಾರಿ ಕವನಾ, ಕಂದಾಯ ಅಧಿಕಾರಿಗಳಾದ ಶಿವಕುಮಾರ್, ವೆಂಕಟೇಶ್, ಬಸರವಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ, ಆಲ್ದೂರು ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್, ಆದಿತ್ಯ ಬೆರಣಗೋಡು, ಸುಪ್ರೀತ್, ಾರೆಸ್ಟ್ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳಿದ್ದರು.