

ಬೆಂಗಳೂರು: ಮಳೆಯ ನಡುವೆಯು ಕಾರ್ಯ ನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಗರ ಸಂಚಾರ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಶ್ಲಾಘಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ರಾತ್ರಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ನಗರದ ಹಲವು ಕಡೆ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಹಲವು ರಸ್ತೆಗಳು ಜಲಾವೃತ್ತವಾಗಿದ್ದವು. ಮರಗಳು-ಮರದ ಕೊಂಬೆಗಳು ಧರೆಗುರುಳಿದ್ದವು. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ತಡರಾತ್ರಿ ವರೆಗೂ ಕರ್ತವ್ಯ ನಿರ್ವಹಿಸಿ ರಸ್ತೆಗಳಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅವರ ಈ ಕಾರ್ಯವನ್ನು ಶ್ಲಾಘಿಸುವುದಾಗಿ ಹೇಳಿದರು.
ಹೆಬ್ಬಾಳ ಮೇಲ್ಸೇತುವೆ ಕೆಳಗೆ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ವೇಳೆ ಸಂಚಾರ ಪೊಲೀಸರು ರಸ್ತೆಗಿಳಿದು ನೀರನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆಗೆ ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಂಚಾರ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸಂಚಾರ ಪೊಲೀಸರ ಕಾರ್ಯವನ್ನು ಎಕ್ಸ್ (ಟ್ವಿಟರ್) ಮೂಲಕವು ಆಯುಕ್ತರು ಶ್ಲಾಸಿದ್ದಾರೆ. ಇನ್ನು ನಗರದಲ್ಲಿ ರಸ್ತೆಗಳಲ್ಲಿ ದುರ್ವರ್ತನೆ, ಗೂಂಡಾಗಿರಿ ಮಾಡುವವರನ್ನು ಬಂಧಿಸಿ ರೌಡಿ ಪಟ್ಟಿ ತೆರೆಯುವುದಾಗಿ ತಿಳಿಸಿದ್ದಾರೆ.